ಕಾಪುವಿನಲ್ಲಿ ಹಿರಿಯ ನಾಯಕ ಆಸ್ಕರ್ ಚೇತರಿಕೆಗಾಗಿ ವಿಶೇಷ ಪ್ರಾರ್ಥನೆ
ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ಚೇತರಿಕೆಗಾಗಿ ಹಾರೈಸಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರ ನೇತೃತ್ವದಲ್ಲಿ ಕಾಪು ತಾಲೂಕಿನ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.
ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನ, ಪೊಲಿಪು ಜಾಮಿಯಾ ಮಸೀದಿ, ಉದ್ಯಾವರ ಚರ್ಚ್, ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರ, ಉದ್ಯಾವರ ಮಹಾಗಣಪತಿ ದೇವಸ್ಥಾನ ಸಹಿತವಾಗಿ ವಿವಿಧ ದೇವಸ್ಥಾನ, ಮಸೀದಿ ಮತ್ತು ಚರ್ಚ್ ಗಳಲ್ಲಿ ಪ್ರಾರ್ಥನೆ, ಹರಕೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಆಸ್ಕರ್ ಅವರು ಎಲ್ಲರ ಆಜಾತಶತ್ರುವಾಗಿದ್ದು, ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪಕ್ಷವನ್ನು ಮುನ್ನಡೆಸಿದ್ದಾರೆ. ಅವರ ಸೇವೆ ಪಕ್ಷ, ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟಕ್ಕೆ ಇನ್ನೂ ಬೇಕಿದೆ. ಅವರಿಗಾಗಿ ಎಲ್ಲೆಡೆ ಪ್ರಾರ್ಥನೆ ನಡೆಯುತ್ತಿದೆ ಎಂದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಪಕ್ಷದ ಮುಖಂಡರಾದ ಕಾಪು ದಿವಾಕರ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ, ರಮೀಜ್ ಹುಸೇನ್, ಶರ್ಫುದ್ದೀನ್ ಶೇಖ್, ನಾಗೇಶ್ ಕುಮಾರ್ ಉದ್ಯಾವರ, ಹರೀಶ್ ನಾಯಕ್ ಕಾಪು ಮತ್ತಿತರರು ಪಾಲ್ಗೊಂಡಿದ್ದರು.