ಕುಂತೂರು ಪದವು ಶಾಲಾ ಗೋಡೆಯಲ್ಲಿ ಸಂಸ್ಕೃತಿಯ ಅನಾವರಣ..!

ಕಡಬ: ಶಾಲೆಗಳ ಗೋಡೆಗಳಲ್ಲಿ ವರ್ಣ ಚಿತ್ರಗಳು ಹೊಸದೇನಲ್ಲ. ಹೆಚ್ಚಿನ ಶಾಲೆಗಳಲ್ಲಿ ವರ್ಲಿ ಚಿತ್ರ ಸೇರಿದಂತೆ ವಿವಿಧ ಬಗೆಯ ವರ್ಣಾಲಂಕಾರಗಳನ್ನು ನಾವೆಲ್ಲರೂ ಕಂಡಿದ್ದೇವೆ. ಆದರೆ ಅದಕ್ಕೆಲ್ಲಾ ಭಿನ್ನವೆಂಬಂತೆ ಕಡಬ ತಾಲೂಕಿನ ಕುಂತೂರು ಗ್ರಾಮದ ಕುಂತೂರು ಪದವು ಸರಕಾರಿ ಶಾಲೆಯ ಗೋಡೆಗಳೆಲ್ಲವೂ ದೇಶದ ವಿವಿಧ ರಾಜ್ಯಗಳ ಕಲೆ, ನೃತ್ಯ, ಜಾನಪದ, ಸಂಸ್ಕೃತಿಗಳನ್ನು ಪ್ರತಿಬಿಂಬಿಸುವ ಕಣ್ಮನ ಸೆಳೆಯುವ ವೈವಿಧ್ಯಮಯ ವರ್ಣ ಚಿತ್ತಾರಗಳಿಂದ ಕಂಗೊಳಿಸುತ್ತಿದೆ. ಈ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ.

ತುಳುನಾಡಿನ ಯಕ್ಷಗಾನ, ಭೂತ ಕೋಲ, ಹುಲಿಕುಣಿತದಿಂದ ಹಿಡಿದು ಕೇರಳದ ಕಥಕ್ಕಳಿ, ತಮಿಳುನಾಡಿನ ಭರತನಾಟ್ಯ, ರಾಜಸ್ಥಾನದ ಲಂಬಾಣಿ ನೃತ್ಯ, ಅಸ್ಸಾಂನ ಬಿಹು ನೃತ್ಯ, ಉತ್ತರಪ್ರದೇಶದ ಕಥಕ್ ನೃತ್ಯ, ಜಾರ್ಖಂಡ್‌ನ ಜಾನಪದ ನೃತ್ಯ, ಮಣಿಪುರದ ಮಣಿಪುರಿ ನೃತ್ಯ, ನೇಪಾಳದ ಮಧುಬನಿ ಶೈಲಿಯ ಚಿತ್ರ, ಆದಿವಾಸಿ ಬೇಟೆಗಾರರ ನೃತ್ಯ ಸೇರಿದಂತೆ 25ಕ್ಕೂ ಸುಂದರ ಚಿತ್ರಗಳು ಕಲಾವಿದರ ಕುಂಚದಿಂದ ಗೋಡೆಗಳ ಮೇಲೆ ಸೃಷ್ಟಿಯಾಗಿದೆ.

ಶಾಲೆಯ ಪ್ರವೇಶ ದ್ವಾರದ ಬಳಿ ಚಿತ್ರಿಸಲಾಗಿರುವ ಹಂಪಿಯ ವಿಶ್ವ ಪ್ರಸಿದ್ಧ ಆಕರ್ಷಕ ಕಲ್ಲಿನ ರಥದ ಬೃಹತ್ ವರ್ಣ ಚಿತ್ರ ನೋಡುಗರ ಮನ ತಣಿಸುವಂತಿದೆ. ವರ್ಲಿ ಚಿತ್ರದ ಮೂಲವನ್ನು ವಿವರಿಸುವ ಚಿತ್ರಗಳು, ವಿವಿಧ ರಾಜ್ಯಗಳ ವಾದ್ಯ ಪರಿಕರಗಳು, ಮಧ್ಯಪ್ರದೇಶದ ಕೋನಾರ್ಕ್ ಸೂರ್ಯ ದೇವಾಲಯ, ಒರಿಸ್ಸಾದ ಪುರಿ ಜಗನ್ನಾಥ ದೇವಾಲಯದ ಚಿತ್ರಗಳು ಆಕರ್ಷಕವಾಗಿವೆ. ಪಡಸಾಲೆಯ ಕಂಬಗಳು ಹಾಗೂ ಗೋಡೆಯ ಉದ್ದಕ್ಕೂ ಆನೆಯ ಸಾಲಿನ ವರ್ಣಚಿತ್ರವನ್ನು ಚಿತ್ರಿಸಲಾಗಿದೆ.

60ವರ್ಷಗಳ ಇತಿಹಾಸ ಇರುವ ಈ ಶಾಲೆಯಲ್ಲಿ ಪ್ರಸ್ತುತ 79 ಮಂದಿ ವಿದ್ಯಾರ್ಥಿಗಳಿದ್ದಾರೆ. ಸರಕಾರಿ ಶಾಲೆಗಳ ಸೌಂದರ್ಯ ವೃದ್ಧಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯ ಮಂಗಳೂರು ವಿದ್ಯಾಂಗ ಉಪನಿರ್ದೇಶಕ ಮಲ್ಲೇಸ್ವಾಮಿ ಅವರ ಪ್ರೇರಣೆಯಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಅವರ ಮಾರ್ಗದರ್ಶನದಲ್ಲಿ ಶಾಲೆಯ ಶಿಕ್ಷಕ ವೃಂದ, ಎಸ್‌ಡಿಎಂಸಿ ಹಾಗೂ ದಾನಿಗಳ ಸಹಕಾರದೊಂದಿಗೆ ಸಮಾನ ಮನಸ್ಕ ಚಿತ್ರಕಲಾ ಶಿಕ್ಷಕರ ಮುತುವರ್ಜಿಯಿಂದಾಗಿ ಶಾಲೆಯನ್ನು ಕುಂಚ ಕಲೆಯ ಮೂಲಕ ಸುಂದರವಾಗಿ ಸಿಂಗರಿಸಲಾಗಿದೆ.

ಶಾಲಾ ಹಳೆವಿದ್ಯಾರ್ಥಿ, ಚಿತ್ರಕಲಾ ಶಿಕ್ಷಕರ ಸಂಘದ ದ.ಕ. ಜಿಲ್ಲಾಧ್ಯಕ್ಷ ಎಣ್ಣೂರು ಸರಕಾರಿ ಪ್ರೌಢಶಾಲೆಯ ಚಿತ್ರಕಲಾ ಶಿಕ್ಷಕ ಮೋಹನ ಗೌಡ ಏನಾಜೆ ಅವರ ನೇತೃತ್ವದಲ್ಲಿ ಚಿತ್ರಕಲಾ ಶಿಕ್ಷಕರಾದ ಕಿಶೋರ್ ಬರಮೇಲು, ದಿನೇಶ್ ಕುಂದರ್ ಬಿಳಿನೆಲೆ, ಮುರಳೀಧರ ಆಚಾರ್ ಹೊಯಿಗೆಬಜಾರ್, ಹರೀಶ್ ಆಚಾರ್ ಬಂಟ್ವಾಳ, ಕಲಾವಿದರಾದ ಗಣೇಶ್ ಅಡ್ಯನಡ್ಡ ದಿನೇಶ್ ಅಡ್ಡನಡ್ಕ ಉಮೇಶ್ ಕಾಪಯ್ಯ, ದೀಕ್ಷಿತ್ ರೈ, ವರ್ಷಾ, ಗೌತಮಿ ಹಾಗೂ ಕೀರ್ತಿ ಸುಮಾರು 2 ತಿಂಗಳನಿಂದ ಇಲ್ಲಿ ಚಿತ್ರ ರಚನೆಯಲ್ಲಿ ನಿರತರಾಗಿದ್ದಾರೆ

ಡಿಡಿಪಿಐ ಮಲ್ಲೇಸ್ವಾಮಿ ಅವರ ಆಶಯದಂತೆ ನಾವೆಲ್ಲಾ ಚಿತ್ರಕಲಾ ಶಿಕ್ಷಕರು ಸೇರಿಕೊಂಡು ವರ್ಷದಲ್ಲಿ ೫ ಸರಕಾರಿ ಶಾಲೆಗಳನ್ನು ಈ ರೀತಿ ವೈವಿಧ್ಯಮಯ ಚಿತ್ರಗಳಿಂದ ಸಿಂಗರಿಸಿ ಹೊಸರೂಪ ನೀಡಬೇಕೆಂಬ ಗುರಿ ಹೊಂದಿದ್ದೇವೆ. ಪ್ರಥಮವಾಗಿ ಕುಂತೂರು ಪದವು ಶಾಲೆಯನ್ನು ಆರಿಸಿಕೊಂಡಿದ್ದು, ಕೆಲಸ ಬಹುತೇಕ ಪೂರ್ಣಗೊಂಡಿದೆ. ಮೋಹನ ಗೌಡ ಏನಾಜಿ ಅವರು ಎಲ್ಲರ ಸಹಕಾರವಿದ್ದು, ಈ ಕೆಲಸಕ್ಕೆ ಸುಮಾರು 1.5 ಲಕ್ಷ ರೂ .ವೆಚ್ಚವಾಗಿದ್ದು ಅದನ್ನು ದಾನಿಗಳು, ಹಳೆ ವಿದ್ಯಾರ್ಥಿಗಳು, ಮಕ್ಕಳ ಪೋಷಕರು ಹಾಗೂ ಶಾಲಾ ಶಿಕ್ಷಕರು ಭರಿಸುತ್ತಿದ್ದಾರೆ. ಸರಕಾರಿ ಶಾಲೆಗೆ ಮಕ್ಕಳನ್ನು ಆಕರ್ಷಿಸುವ ಉದ್ದೇಶದಿಂದ ಮಾಡುತ್ತಿರುವ ಈ ಕಾರ್ಯ ಎಲ್ಲರ ಸಹಕಾರದಿಂದ ಯಶಸ್ವಿಯಾಗುತ್ತಿದೆ ಎಂದು ಶಾಲಾ ಮುಖ್ಯಶಿಕ್ಷಕಿ ಗಿರಿಜಾ ವಿ. ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಸೋಮನಾಥ ಮಣಿಕ್ಕಳ ಅವರು ಅಭಿಪ್ರಾಯಪಡುತ್ತಾರೆ.

ಒಟ್ಟಿನಲ್ಲಿ ಕಡಬದ ಕುಂತೂರು ಪದವಿನ ಸರ್ಕಾರಿ ಶಾಲೆ ವಿವಿಧ ಕಲಾಕೃತಿಗಳಿಂದ ನೋಡುಗರ ಗಮನ ಸೆಳೆಯುತ್ತಿದೆ. ಸರ್ಕಾರಿ ಶಾಲೆಗೆ ಹಿಂಜರಿಯುತ್ತಿರುವ ಈ ಕಾಲ ಘಟ್ಟದಲ್ಲಿ ಮಕ್ಕಳನ್ನು ಆಕರ್ಷಿಸುವಂತೆ ಮಾಡಿ ಮಾದರಿ ಕಾರ್ಯ ಮಾಡಿರುವ ಈ ಶಾಲೆಯ ಸಿಬ್ಬಂದಿ ಮತ್ತು ಹಳೆ ವಿದ್ಯಾರ್ಥಿಗಳ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

Related Posts

Leave a Reply

Your email address will not be published.