ಪರಿಮಿತಿಯೊಳಗೆ ಕುಂದಾಪುರ ಪ್ರವೇಶಕ್ಕೆ ಅನುಮತಿ ಕೊಡಿ : ಪುರಸಭಾ ಸದಸ್ಯ ಗಿರೀಶ್ ಜಿ.ಕೆ ಎಚ್ಚರಿಕೆ

ಕುಂದಾಪುರ : ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪರಿಮಿತಿಯೊಳಗೆ ಕುಂದಾಪುರ ಪ್ರವೇಶಕ್ಕೆ ಅನುಮತಿ ಕೊಡಿ ಎಂದು ಸಂಸದರು, ಶಾಸಕರು ಬೇಡಿಕೆ ಇಟ್ಟಿದ್ದಾರೆ. ನಾವೇನು ನಿಮ್ಮ ಬಳಿ ಭಿಕ್ಷೆ ಕೇಳುತ್ತಿಲ್ಲ. ಪ್ರತೀ ಬಾರಿ ಸಭೆಗೆ ಒಬ್ಬೊಬ್ಬ ಅಧಿಕಾರಿಗಳು ಬಂದು ಸುಳ್ಳು ಭರವಸೆಗಳನ್ನು ಕೊಟ್ಟು ಹೋಗುತ್ತೀರಿ. ನಾವೇನು ನಿಮಗೆ ಆಟದ ಗೊಂಬೆಗಳ ಹಾಗೆ ಕಾಣುತ್ತಿದ್ದೇವಾ. ನಿಮ್ಮಲ್ಲಿ ಸಾಧ್ಯವಿಲ್ಲದಿದ್ದರೆ ಹೇಳಿಬಿಡಿ. ನಮ್ಮ ಊರಿನ ಬಗ್ಗೆ ನಮಗೆ ಕಾಳಜಿ ಇದೆ. ನೀವು ಕೇಸು ಹಾಕಿ ನಮ್ಮನ್ನು ಜೈಲಿಗೆ ಕಳುಹಿಸಿದರೂ ಚಿಂತೆ ಇಲ್ಲ. ತಡೆಬೇಲಿ ಒಡೆದು ನಾವೇ ನಗರ ಪ್ರವೇಶಕ್ಕೆ ದಾರಿ ಮಾಡಿಕೊಡುತ್ತೇವೆ ಎಂದು ಪುರಸಭಾ ಸದಸ್ಯ ಗಿರೀಶ್ ಜಿ.ಕೆ ಅಸಮಧಾನ ವ್ಯಕ್ತಪಡಿಸಿದರು.

ಅವರು ಇಲ್ಲಿನ ಪುರಸಭೆಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕುಂದಾಪುರ ನಗರ ಒಳ ಪ್ರವೇಶಿಸಲು ಹಾಗೂ ನಗರದಿಂದ ಹೆದ್ದಾರಿಗೆ ತೆರಳಲು ಅವಕಾಶವಾಗುವಂತೆ ಬೊಬ್ಬರ್ಯನಕಟ್ಟೆ ಬಳಿಯಲ್ಲಿ ಪ್ರವೇಶ ಹಾಗೂ ನಿರ್ಗಮನಕ್ಕೆ ಅವಕಾಶ ನೀಡಬೇಕು ಎನ್ನುವ ಸ್ಥಳೀಯರ ಒಕ್ಕೊರಲ ಅಹವಾಲನ್ನು ಹೆದ್ದಾರಿಯ ಯೋಜನಾ ನಿರ್ದೇಶಕರು ಏಕಪಕ್ಷೀಯವಾಗಿ ಕಡೆಗಣಿಸಿರುವುದು ಸರಿಯಲ್ಲ. ಹೆದ್ದಾರಿಯಿಂದ ನಗರ ಪ್ರವೇಶಕ್ಕೆ ಅವಕಾಶ ನೀಡುವಂತೆ ಸಾರ್ವಜನಿಕರು, ಶಾಸಕರು, ಕೇಂದ್ರ ಸಚಿವರು, ಸಂಘ ಸಂಸ್ಥೆಗಳು, ಸ್ಥಳೀಯಾಡಳಿತ ನಿರಂತರವಾಗಿ ಮನವಿ ಮಾಡಿಕೊಳ್ಳುತ್ತಿದ್ದರೂ, ಹೆದ್ದಾರಿ ಇಲಾಖೆ ಈ ಕುರಿತು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳದೆ ಜನರ ಬೇಡಿಕೆಯನ್ನು ಕಡೆಗಣಿಸುತ್ತಿದೆ ಎಂದರು.

ಇದಕ್ಕೆ ಉತ್ತರಿಸಿದ ಹೆದ್ದಾರಿ ಇಲಾಖೆಯ ಅಧಿಕಾರಿಗಳು ನಗರಕ್ಕೆ ಹೆದ್ದಾರಿಯಿಂದ ಸಂಚಾರಕ್ಕೆ ಕಲ್ಪಿಸಿದ್ದಲ್ಲಿ ಈ ಭಾಗದಲ್ಲಿ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇರುವುದಾಗಿ ಇತ್ತೀಚೆಗೆ ಸ್ಥಳ ಪರಿಶೀಲನೆ ನಡೆಸಿದ ಯೋಜನಾ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿರುವುದಾಗಿ ತಿಳಿಸಿದರು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಮೋಹನ್‍ದಾಸ್ ಶೆಣೈ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರುಗಾರ, ಸಂತೋಷ್ ಶೆಟ್ಟಿ, ರತ್ನಾಕರ ಚರ್ಚ್‍ರಸ್ತೆ ಅವರುಗಳು, ಅವೈಜ್ಞಾನಿಕ ಹೆದ್ದಾರಿ ನಿರ್ಮಾಣದಿಂದಾಗಿ, ಸುಂದರ ಕುಂದಾಪುರದ ಕನಸನ್ನು ಹೊಸಕಿ ಹಾಕಲಾಗಿದೆ. ಬೇರೆ ಬೇರೆ ಊರುಗಳಲ್ಲಿ ಹೆದ್ದಾರಿಯಿಂದ ನಗರ ಪ್ರವೇಶಕ್ಕೆ ಅವಕಾಶ ನೀಡಿದ್ದರೂ, ಕುಂದಾಪುರಕ್ಕೆ ಮಾತ್ರ ಮಲತಾಯಿ ಧೋರಣೆ ತೋರಲಾಗುತ್ತಿದೆ. ವ್ಯವಹಾರಿಕಾ ಕೇಂದ್ರವಾಗಿದ್ದ ಕುಂದಾಪುರ, ಹೆದ್ದಾರಿ ಚತುಷ್ಪಥದ ಬಳಿಕ ವ್ಯವಹಾರವಿಲ್ಲದೆ ಬಿಕೋ ಎನ್ನುತ್ತಿದೆ. ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೆ ಸ್ಥಳ ಪರಿಶೀಲನೆ ನಡೆಸಿ, ನಗರ ಪ್ರವೇಶಕ್ಕೆ ಅವಕಾಶ ಇಲ್ಲ ಎನ್ನುವ ಏಕ ಪಕ್ಷೀಯವಾಗಿ ತೀರ್ಮಾನ ಪ್ರಕಟಿಸುವ ಹೆದ್ದಾರಿ ಯೋಜನಾ ನಿರ್ದೇಶಕರ ನಡೆ, ಒಪ್ಪತಕ್ಕದ್ದಲ್ಲ. ಪುರಸಭೆಯ ಒಂದೊಂದು ಸಭೆಗೆ ಬೇರೆ ಬೇರೆ ಅಧಿಕಾರಿಗಳು ಬರುವುದರಿಂದ ಇಲ್ಲಿನ ಸಮಸ್ಯೆಯ ಕುರಿತು ಸಮರ್ಪಕ ಮಾಹಿತಿಗಳೇ ತಲುಪುತ್ತಿಲ್ಲ ಎಂದರು.

ಪುರಸಭೆಯ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಅಧ್ಯಕ್ಷತೆ ವಹಿಸಿದ್ದರು,ಉಪಾಧ್ಯಕ್ಷ ಸಂದೀಪ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಪಾಲ್ಗೊಂಡಿದ್ದರು.

 

Related Posts

Leave a Reply

Your email address will not be published.