ಅಕ್ಟೋಬರ್ 10 ರಂದು ಕಲ್ಕೂರ ಪ್ರತಿಷ್ಠಾನದಿಂದ ಕಾರಂತ ಹುಟ್ಟುಹಬ್ಬ

ಕಲ್ಕೂರ ಪ್ರತಿಷ್ಟಾನವು ವರ್ಷಂಪ್ರತಿಯಂತೆ ಅಕ್ಟೋಬರ್ 1೦ರಂದು ಕಡಲತೀರದ ಭಾರ್ಗವರೆಂದೇ ಪ್ರಸಿದ್ಧರಾಗಿರುವ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕೋಟ ಶಿವರಾಮ ಕಾರಂತರ ಹುಟ್ಟುಹಬ್ಬವನ್ನು ಆಚರಿಸಲಿದ್ದೇವೆ. ಕೊಡಿಯಾಲ್ ಗುತ್ತುವಿನ ಪತ್ತುಮುಡಿ ಸಭಾ ಭವನದಲ್ಲಿ ಕಾರ್ಯಕ್ರಮ ಜರುಗಲಿದ್ದು, ಈ ವರ್ಷದ ಕಾರಂತ ಪ್ರಶಸ್ತಿಯನ್ನು ಖ್ಯಾತ ವಾರಪತ್ರಿಕೆ ತರಂಗದ ವ್ಯವಸ್ಥಾಪಕ ಸಂಪಾದಕರಾದ ಡಾ. ಸಂಧ್ಯಾ ಎಸ್. ಪೈ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದರು.

ಅವರು ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಅಕ್ಟೋಬರ್ 1೦ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಸಮಾರಂಭ ಜರುಗಲಿದ್ದಯ, ಪೂಜ್ಯರು ಆಶೀರ್ವಚನ ನೀಡಲಿದ್ದಾರೆ. ಮೇಯರ್ ಪ್ರೇಮಾನಂದ ಶೆಟ್ಟಿ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪಿ.ಎಸ್. ಎಡಪಡಿತ್ತಾಯ ಕಾರಂತ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಇನ್ನು ಇತ್ತೀಚೆಗೆ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಐಸಿಎಐ ನಡೆಸಿದ ಅಖಿಲ ಭಾರತ ಸಿಎ ಅಂತಿಮ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟಲ್ಲಿ ಪ್ರಥಮ ರ್‍ಯಾಂಕ್ ಪಡೆದ ಕು. ರುಥ್ ಕ್ಲೇರ್ ಡಿಸಿಲ್ವ ಅವರಿಗೆ ಕಲ್ಕೂರ ಶೈಕ್ಷಣಿಕ ಸಾಧನಾ ಪ್ರಶಸ್ತಿ ನೀಡಿ ಅಭಿನಂದಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಜಿ.ಕೆ. ಭಟ್ ಸೆರಾಜೆ, ನಿತ್ಯಾನಂದ ಕಾರಂತ, ಜನಾರ್ಧನ್ ಹಂದೆ, ವಿಜಲಕ್ಷ್ಮೀ ಬಿ. ಶೆಟ್ಟಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.