ಉಚ್ಚಿಲದಲ್ಲಿ ಹಠಾತ್ತನೇ ನಿಂತ ಬಸ್ಸಿನ ಹಿಂಬದಿಗೆ ಬೈಕ್ ಡಿಕ್ಕಿ: ಬೈಕ್ ಸವಾರರಿಗೆ ಗಂಭೀರ ಗಾಯ
ಉಳ್ಳಾಲ: ಬಸ್ ಹಿಂಬದಿಗೆ ಬೈಕ್ ಢಿಕ್ಕಿ ಹೊಡೆದು ತಲಪಾಡಿ ಟೋಲ್ ಸಿಬ್ಬಂದಿ ಗಂಭೀರ ಗಾಯಗೊಂಡಿರುವ ಘಟನೆ ಉಚ್ಚಿಲ ರಾ.ಹೆ 66ರಲ್ಲಿ ಸಂಭವಿಸಿದೆ.
ಬೈಕ್ ಸವಾರ ಆಂಧ್ರ ಪ್ರದೇಶದ ಮೂಲದ ಶಶಿಧರ್ ರೆಡ್ಡಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಧ್ರ ಮೂಲದ ಶಶಿಧರ್ ರೆಡ್ಡಿ (23) ಮತ್ತು ಶಾನು ಭಾಝ್ (31) ಎಂಬವರು ತಲಪಾಡಿ ಟೋಲ್ ಪ್ಲಾಝಾದ ಸಿಬ್ಬಂದಿಗಳಾಗಿದ್ದು ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ. ಉಚ್ಚಿಲದಲ್ಲಿ ಖಾಸಗಿ ಸಿಟಿ ಬಸ್ಸೊಂದು ಹಠಾತ್ತಾಗಿ ಬ್ರೇಕ್ ಹೊಡೆದ ಕಾರಣ ಹಿಂದಿನಿಂದ ಧಾವಿಸುತ್ತಿದ್ದ ಬೈಕ್ ಸವಾರರು ಡಿಕ್ಕಿ ಹೊಡೆದಿದ್ದಾರೆ.
ಅಪಘಾತದ ತೀವ್ರತೆಗೆ ಬೈಕ್ ಸಂಪೂರ್ಣವಾಗಿ ಬಸ್ಸಿನ ಒಳಗೆ ನುಗ್ಗಿದೆ. ಬೈಕ್ ಸವಾರ ಶಶಿಧರ್ ತಲೆಗೆ ಗಂಭೀರ ಗಾಯಗಳಾಗಿದ್ದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಹ ಸವಾರ ಶಾನು ಭಾಝ್ ಕೂಡ ಗಾಯಾಳುವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.