ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ 2 ಪರೀಕ್ಷೆ; ದ್ವಿತೀಯ ಪಿಯುಸಿ ಪರೀಕ್ಷೆ ರದ್ದು
ಕೋವಿಡ್ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಿದ್ದು, ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿದ್ಯಾರ್ಥಿಯ ಕಲಿಕಾ ಮಟ್ಟ ಮಹತ್ವದ್ದಾಗಿದ್ದು, ಈ ನಿಟ್ಟಿನಲ್ಲಿ ಎಸ್.ಎಸ್.ಎಲ್. ಸಿ. ವಿದ್ಯಾರ್ಥಿಗಳಿಗೆ 2 ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಪಡಿಸಲಾಗಿದ್ದು, ಆದರೆ ಎಸ್.ಎಸ್.ಎಲ್.ಸಿ.ಗೆ ಈ ಬಾರಿ ಎರಡು ಪರೀಕ್ಷೆ ನಡೆಸಲು ನಿರ್ಧರಿಸಿದ್ದೇವೆ ಎಂದರು. ಗಣಿತ ಹಾಗೂ ಸಮಾಜ ವಿಜ್ಞಾನ ಮೂರು ವಿಷಯ ಸೇರಿಸಿ ಒಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಇನ್ನೊಂದು ಭಾಷೆಗೆ ಸಂಬಂಧಿಸಿದ ಪರೀಕ್ಷೆ. ಐಚ್ಛಿಕ ಭಾಷೆಗಳಿಗೆ ಒಂದೇ ಪೇಪರ್ ಇರಲಿದ್ದು, ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. ಎ+ ಹಾಗೂ ಎ ಗ್ರೇಡಿಂಗ್ ಮಾದರಿಯಲ್ಲಿ ಫಲಿತಾಂಶ ನೀಡಲಾಗುತ್ತದೆ. ಒಂದು ಕೊಠಡಿಯಲ್ಲಿ 10-12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರಲಿದ್ದು, ವಿದ್ಯಾರ್ಥಿಗಳಿಗೆ ಎನ್95 ಮಾಸ್ಕ್ ನೀಡಲು ನಿರ್ಧರಿಸಲಾಗಿದೆ. 6 ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಯಾವುದೇ ವಿದ್ಯಾರ್ಥಿಗಳನ್ನು ಫೇಲ್ ಮಾಡುವುದಿಲ್ಲ. ಆದರೆ ಗ್ರೇಡಿಂಗ್ ಮೂಲಕ ಫಲಿತಾಂಶ ನೀಡಲಾಗುತ್ತದೆ.
ಇನ್ನು ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಸುವುದಿಲ್ಲ ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಅಧಿಕೃತವಾಗಿ ಘೋಷಿಸಿದ್ದಾರೆ. ರಾಜ್ಯದ ಶಿಕ್ಷಣ ತಜ್ಞರು, ಸಚಿವರು, ಹಿರಿಯ ಪತ್ರಕರ್ತರು, ಪೆÇೀಷಕರು ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ರಾಜ್ಯದಲ್ಲಿ ಒಂದು ವರ್ಗವು ಪರೀಕ್ಷೆ ಬೇಡ ಎನ್ನುತ್ತಿದ್ದರೆ, ಇನ್ನೊಂದು ವರ್ಗವು ಪರೀಕ್ಷೆ ನಡೆಸಬೇಕು ಎನ್ನುತ್ತಿದೆ. ಪ್ರತಿಯೊಂದು ನಿರ್ಧಾರದ ಬಗ್ಗೆ ಪರ-ವಿರೋಧಗಳು ವ್ಯಕ್ತವಾಗುವುದು ಸರ್ವೇ ಸಾಮಾನ್ಯವಾಗಿದೆ. ವಿದ್ಯಾರ್ಥಿಗಳ ಆರೋಗ್ಯ ಮತ್ತು ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ನಿರ್ಧಾರ ತೆಗೆದುಕೊಳ್ಳಲಾಗಿದೆ.ರಾಜ್ಯದ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸುವ ನಿರ್ಧಾರದಿಂದ ಕುಗ್ಗಬಾರದು. ಐಐಟಿ ವ್ಯಾಸಂಗ ಮಾಡುವ ಗುರಿಯನ್ನು ಹೊಂದಿದ್ದೀರಿ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಪರೀಕ್ಷೆಗಳನ್ನು ನಡೆಸುವುದು ಸೂಕ್ತವಲ್ಲ.ವಿಜ್ಞಾನ, ಕಲೆ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಕ್ಕೆ ಕನಿಷ್ಠ 12 ದಿನಗಳೇ ಬೇಕಾಗಿರುತ್ತದೆ. ಕೊವಿಡ್-19 ಸಂದಿಗ್ಧ ಸ್ಥಿತಿಯಲ್ಲಿ ಪರೀಕ್ಷೆಗಳನ್ನು ನಡೆಸುವ ತೊಂದರೆ ತೆಗೆದುಕೊಳ್ಳುವುದಿಲ್ಲ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.