ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷನಾದಲ್ಲಿ ಜಿಲ್ಲೆಗೆ ಕನ್ನಡ ಭವನ ನಿರ್ಮಾಣ : ಎಂ.ಆರ್ ವಾಸುದೇವ
ಪುತ್ತೂರು: ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ತಾನು ಸ್ಪರ್ಧಿಸಿದ್ದು, ಜಿಲ್ಲಾಧ್ಯಕ್ಷರಾಗಿ ಚುನಾಯಿತರಾದರೆ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಿಸುವ ಬಗ್ಗೆ ಪ್ರತ್ನಿ ಪಡುತ್ತೇನೆ ಎಂದು ಕಸಾಪ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿಯಾದ ಎಂ.ಆರ್. ವಾಸುದೇವ ಮಂಗಳೂರು ಅವರು ತಿಳಿಸಿದ್ದಾರೆ.
ಅವರು ಪುತ್ತೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾನು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕನಾಗಿ 15 ವರ್ಷಗಳಿಗೂ ಮೇಲ್ಪಟ್ಟು ಸೇವೆ ಸಲ್ಲಿಸಿದ್ದೇನೆ. ಈ ಸಂದರ್ಭದಲ್ಲಿ ತ್ರಿಭಾಷಾ ಸೂತ್ರದಡಿಯಲ್ಲಿ ವಿಮಾನ ನಿಲ್ದಾಣದ ನಾಮಫಲಕವನ್ನು ಕನ್ನಡದಲ್ಲಿ ಮೊದಲ ಬಾರಿಗೆ ಅಳವಡಿಸಿದ್ದೇನೆ. ಅಲ್ಲದೆ ಕನ್ನಡ ಭಾಷೆಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಘೋಷಣೆಯ ವ್ಯವಸ್ಥೆಯನ್ನು ಮಾಡಿರುತ್ತೇನೆ. ವಿಮಾನ ನಿಲ್ದಾಣಕ್ಕಾಗಿ ಭೂಸ್ವಾಧೀನ, ರಸ್ತೆ ವಿಸ್ತರಣೆ ಮಾಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದರ್ಜೆಗೆ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಕೊಡಿಸಿದ್ದೇನೆ.
ನಿವೃತ್ತಿಯ ಬಳಿಕ ಇದೀಗ ನ.21ಕ್ಕೆ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಪರಿಷತ್‍ನ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಾ ಕಣದಲ್ಲಿದ್ದೇನೆ. ನಾನು ಗೆಲುವು ಪಡೆದಲ್ಲಿ ಕನ್ನಡ ಭವನ ನಿರ್ಮಾಣ ಪ್ರಯತ್ನದ ಸಹಿತ ಸಾಹಿತ್ಯ ಪರಿಷತ್‍ನಲ್ಲಿ ಯುವ ಸಮುದಾಯಕ್ಕೆ ಅವಕಾಶ ನೀಡುವ ನಿಟ್ಟಿನಲ್ಲಿ ಸದಸ್ಯತ್ವ ಹೆಚ್ಚಳ, ಸಾಹಿತ್ಯವು ಪಂಡಿತರಿಂದ ಪಾಮರರತ್ತ ಚಲಿಸುವಂತೆ ಯೋಜನೆ, ಗ್ರಾಮಗಳಲ್ಲಿ ಸಾಹಿತ್ಯ ಪರ ಕಾರ್ಯಕ್ರಮ ರೂಪಿಸುವುದು ಮತ್ತು ಕನ್ನಡ ಶಾಲೆಗಳು ಮುಚ್ಚದಂತೆ ತಡೆಯಲು ಸರ್ಕಾರ ಹಾಗೂ ಸಾರ್ವಜನಿಕರಿಗೆ ಪ್ರೇರಣೆ ನೀಡುವ ಕೆಲಸ ಮಾಡಲಿದ್ದೇನೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅನಾರು ಕೃಷ್ಣ ಶರ್ಮ, ಕೆ. ಮಹಾಲಿಂಗ ಪಾಟಾಳಿ, ಶರವೂರು ಸುಬ್ಬರಾವ್ ಮತ್ತು ರಾಧಾಕೃಷ್ಣ ಉಪಸ್ಥಿತರಿದ್ದರು.