ಕಾಫಿ ಪುಡಿಯಿಂದ ಅರಳಿದ ಕಟೀಲಿನ ಭ್ರಮರಾಂಭೆ

ಪೈಂಟಿಂಗ್, ಕ್ಯಾನ್ ವಾಸ್, ಅಶ್ವತ್ಥದ ಎಲೆ ಹಾಗೂ ಮೊಳೆಗಳನ್ನು ಬಳಸಿ ಚಿತ್ರಗಳನ್ನು ಬಿಡಿಸಿ ಹಲವಾರು ಕಲಾವಿದರು ಈಗ ಗಮನ ಸೆಳೆಯುತ್ತಿರುವ ಮಧ್ಯೆಯೇ ಇದೀಗ ಕಾಲೇಜು ವಿದ್ಯಾರ್ಥಿ ಶ್ರವಣ್ ಪೂಜಾರಿ ಮಾರ್ನಾಡು ಕಾಫಿ ಹುಡಿಯನ್ನು ಬಳಸಿ ಹಲವು ಗಣ್ಯರ ಚಿತ್ರ ಬಿಡಿಸಿದ್ದಲ್ಲದೆ, ನೆನೆದವರ ಮನದಲ್ಲಿ ನೆಲೆಯಾಗಿ, ನಂಬಿರುವ ಭಕ್ತರ ರಕ್ಷೆಯಾಗಿ, ಸಹಸ್ರಾರು ಭಕ್ತರ ಪೂಜೆ ಹಾಗೂ ಹರಕೆಗಳನ್ನು ಪಡೆದು, ಪರಿಮಳ ಭರಿತ ಮಲ್ಲಿಗೆ ಹೂವಿನಲ್ಲಿ ಸಿಂಗಾರಗೊಂಡು, ತುಳುನಾಡ ತಮೆರಿ ಎಂದೆ ಪ್ರಸಿದ್ಧಿ ಪಡೆದಿರುವ ಕಟೀಲು ಕ್ಷೇತ್ರದ ಭ್ರಾಮರಾಂಭೆಯ ಚಿತ್ರವನ್ನು ಅರಳಿಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಕೋರೊನಾ ಎಂಬ ಮಹಾಮಾರಿಯಿಂದಾಗಿ “ಲಾಕ್ ಡೌನ್ ” ಆದ ಸಂದರ್ಭದಲ್ಲಿ ವ್ಯಾಪಾರ- ವಹಿವಾಟುಗಳಿಗೆ ಹಾಗೂ ದುಡಿದು ತಿನ್ನುವ ಕಾರ್ಮಿಕ ವರ್ಗದವರು ನಾನಾ ರೀತಿಯಲ್ಲಿ ತೊಂದರೆಯನ್ನು ಅನುಭವಿಸಿದ್ದಾರೆ. ಆದರೆ ಇದೇ ” ಲಾಕ್ ಡೌನ್ ” ಕೆಲವರಿಗೆ ವರದಾನವೂ ಆಗಿದೆ. ಹೇಗೆಂದರೆ ಕೆಲಸವಿಲ್ಲದೆ, ಶಾಲಾ ಕಾಲೇಜಿಲ್ಲದೆ ಮನೆಯಲ್ಲೇ ಕುಳಿತುಕೊಂಡಿದ್ದ ಕೆಲವು ಯುವಕ-ಯುವತಿಯರು ಯುವ ಕಲಾವಿದರಾಗಿ ಹೊರಹೊಮ್ಮಲು ಸಾಧ್ಯವಾಗಿದೆ. ಅದರಂತೆ ಶ್ರವಣ್ ಪೂಜಾರಿ ಮಾರ್ನಾಡ್ ಕೂಡಾ ಬ್ರೂ ಕಾಫಿ ಹುಡಿಯನ್ನು ಬಳಸಿ ಚಿತ್ರಗಳನ್ನು ಬಿಡಿಸುವ ಮೂಲಕ ಬೆಳಕಿಗೆ ಬಂದ ಪತ್ರಿಭೆಯಾಗಿದ್ದಾರೆ.
ಎಳೆ ವಯಸ್ಸಿನಲ್ಲಿಯೇ ಚಿತ್ರಕಲೆಯ ಬಗ್ಗೆ ಆಸಕ್ತಿಯನ್ನು ಹೊಂದಿದ್ದ ಶ್ರವಣ್ ಮಾರ್ನಾಡು ತಾನು ಚಿತ್ರಕಲೆಯಲ್ಲಿ ಇತರರಿಗಿಂತ ವಿಶೇಷವಾಗಿ ಗುರುತಿಸಿಕೊಳ್ಳಬೇಕೆನ್ನುವ ನಿಟ್ಟಿನಲ್ಲಿ ಅಲೋಚನೆ ಮಾಡಿದ್ದು ಅದರಂತೆ ಕಾಫಿ ಹುಡಿಯಲ್ಲಿ ಚಿತ್ರಗಳನ್ನು ಅರಳಿಸುವ ಯೋಚನೆ ಮಾಡಿ ಮೊದಲಿಗೆ ಕನ್ನಡ ಚಿತ್ರರಂಗದ ನಟ ಯಶ್ ಅವರ ಚಿತ್ರವನ್ನು ಬಿಡಿಸಿ ವಾಟ್ಸಫ್‍ನಲ್ಲಿ ಹರಿಯಬಿಟ್ಟಿದ್ದರು. ಅದು ಅತೀ ಹೆಚ್ಚು ಶೇರ್ ಆಗಿದ್ದರಿಂದ ಇನ್ನೂ ಉತ್ಸಾಹ ಹೆಚ್ಚಾಗಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ,ಕಂಬಳದ ದಾಖಲೆಯ ಓಟಗಾರ ಮಿಜಾರು ಅಶ್ವತ್ಥಪುರ ಶ್ರೀನಿವಾಸ ಗೌಡ, ಧರ್ಮಸ್ಥಳದ ಧರ್ಮಾಧಿಕಾರಿ, ರಾಜಶ್ರೀ ಡಾ.ಡಿ.ವೀರೇಂದ್ರ ಹೆಗ್ಗಡೆ, ಶಾಸಕ ಭರತ್ ಶೆಟ್ಟಿ, ಸಚಿವ ಸುನೀಲ್ ಕುಮಾರ್, ಶಾಸಕ ಹರೀಶ್ ಪೂಂಜಾ, ವಿವೇಕ್ ಆಳ್ವ ಮುಂತಾದವರ ಚಿತ್ರಗಳನ್ನು ಅರಳಿಸಿ ಫ್ರೇಮ್ ಹಾಕಿ ನೀಡಿದ್ದಾರೆ. ಇದಲ್ಲದೆ ಭಾರತೆಮಾತೆ, ಮತ್ತು ಕೊಡಮಣಿತ್ತಾಯ ದೈವದ ಚಿತ್ರಗಳನ್ನು ಬಿಡಿಸಿ ಸೈ ಎನಿಸಿಕೊಂಡಿದ್ದಾರೆ.

ಮಾರ್ನಾಡುವಿನ ವಾಸುದೇವ ಪೂಜಾರಿ-ಸವಿತಾ ದಂಪತಿಯ ಪುತ್ರನಾಗಿರುವ ಶ್ರವಣ್ ಪೂಜಾರಿ ಮುಂಬೈನಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಆಲಂಗಾರಿನಲ್ಲಿ ಪ್ರೌಢ ಶಿಕ್ಷಣ, ಜೈನ್‍ನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದು ಇದೀಗ ಆಳ್ವಾಸ್‍ನಲ್ಲಿ ಬಿವಿಎ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಶಾಲಾ ಮಟ್ಟದಲ್ಲಿ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ಬಹುಮಾನ ಪಡೆದುಕೊಂಡಿದ್ದಾರೆ. ಇದೀಗ ಬಿಡಿಸಿರುವ ಕಟೀಲು ದೇವಿಯ ಚಿತ್ರವನ್ನು ಅರಳಿಸಿ ಶ್ರೀಕ್ಷೇತ್ರಕ್ಕೆ ಈಗಾಗಲೇ ನೀಡಿ ಆಸ್ರಣ್ಣರುಗಳಿಂದ ಮೆಚ್ಚುಗೆಯನ್ನು ಪಡೆದಿದ್ದು ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Related Posts

Leave a Reply

Your email address will not be published.