ಕೇರಳದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಆವಾಂತರ : ಮೃತಪಟ್ಟವರ ಸಂಖ್ಯೆ 24ಕ್ಕೇರಿಕೆ

ಕೇರಳದಲ್ಲಿ ಶನಿವಾರದಿಂದೀಚೆಗೆ ವ್ಯಾಪಕ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಮತ್ತು ಭೂಕುಸಿತ ಮುಂದುವರಿದಿದೆ. ರವಿವಾರ ಮಧ್ಯಾಹ್ನದ ವೇಳೆಗೆ ಮಳೆಯ ತೀವ್ರತೆ ಕಡಿಮೆಯಾಗಿದ್ದು, ಸಂಭಾವ್ಯ ಭೂಕುಸಿತದ ಬಗ್ಗೆ ಅಧಿಕಾರಿಗಳು ತೀವ್ರ ನಿಗಾ ಇರಿಸಿದ್ದಾರೆ.

ಏತನ್ಮಧ್ಯೆ ಮಳೆ ಸಂಬಂಧಿ ಅನಾಹುತಗಳಿಂದ ಮೃತಪಟ್ಟವರ ಸಂಖ್ಯೆ 24ಕ್ಕೇರಿದ್ದು, 11 ಜಿಲ್ಲೆಗಳಲ್ಲಿ ಸೋಮವಾರ ಕೂಡಾ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಗಳ ವಿವಿಧೆಡೆ ಈ ವ್ಯಾಪಕ ಮಳೆಗೆ ಮೇಘ ಸ್ಫೋಟ ಕಾರಣ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ಕೊಟ್ಟಾಯಂ ಜಿಲ್ಲೆಯಲ್ಲಿ 13 ಹಾಗೂ ಇಡುಕ್ಕಿ ಜಿಲ್ಲೆಯಲ್ಲಿ ಒಂಬತ್ತು ಸೇರಿದಂತೆ ಇದುವರೆಗೆ ಒಟ್ಟು 22 ಮೃತದೇಹಗಳು ಪತ್ತೆಯಾಗಿವೆ. ಇಡುಕ್ಕಿ ಜಿಲ್ಲೆಯಲ್ಲಿ ಇನ್ನೂ ಇಬ್ಬರು ನಾಪತ್ತೆಯಾಗಿದ್ದು, ಶೋಧ ಮತ್ತು ಪರಿಹಾರ ಕಾರ್ಯ ಮುಂದುವರಿದಿದೆ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ಹೇಳಿದೆ.

ಅರಬ್ಬೀ ಸಮುದ್ರದ ಲಕ್ಷದ್ವೀಪ ಪ್ರದೇಶದಲ್ಲಿ ಸಂಭವಿಸಿದ ವಾಯುಭಾರ ಕುಸಿತ ಪರಿಸ್ಥಿತಿ ಸುಧಾರಿಸಿದ್ದರೂ, ಸೋಮವಾರ ಸಂಜೆವರೆಗೂ ಭಾರಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ಕೊಟ್ಟಾಯಂ ಜಿಲ್ಲೆಯ ಕೂಟಿಕ್ಕಲ್ ಮತ್ತು ಇಡುಕ್ಕಿ ಜಿಲ್ಲೆಯ ಕೊಕ್ಕಾಯಾರ್ ಪ್ರದೇಶಗಳಲ್ಲಿ ಎರಡು ಪ್ರಮುಖ ಭೂಕುಸಿತ ಘಟನೆಗಳು ವರದಿಯಾಗಿದ್ದು, ಇಡುಕ್ಕಿ ಜಿಲ್ಲೆಯ ಪೀರುಮೇಡು ಎಂಬಲ್ಲಿ ಗರಿಷ್ಠ 24 ಸೆಂಟಿಮೀಟರ್ ಮಳೆ ಬಿದ್ದಿದೆ.

ಕೇರಳ, ಕರ್ನಾಟಕ ಮತ್ತು ಲಕ್ಷದ್ವೀಪದಲ್ಲಿ ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ. ಕೇರಳ-ಕರ್ನಾಟಕ-ಲಕ್ಷದ್ವೀಪ ಕರಾವಳಿಯಲ್ಲಿ ಇಂದು ರಾತ್ರಿ 11.30ರ ವೇಳೆಗೆ ಸಮುದ್ರದಲ್ಲಿ ಎತ್ತರದ ಅಲೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

Related Posts

Leave a Reply

Your email address will not be published.