ಕೊಲೆ ಯತ್ನ ಪ್ರಕರಣ – 6 ಆರೋಪಿಗಳ ಬಂಧನ

ಪುತ್ತೂರು: ಆ 24 ರಂದು ರಾತ್ರಿ ಪುತ್ತೂರಿನ ದರ್ಬೆಯ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್’ಹಾಕಿಸುತ್ತಿದ್ದ ಸಂದರ್ಭ ತಂಡವೊಂದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಕೃತ್ಯವೊಂದರ ಸಾಕ್ಷಿ ನುಡಿಯುವ ವಿಚಾರದಲ್ಲಿ ಉಂಟಾದ ಮನಸ್ತಾಪದಿಂದ ಆರೋಪಿಗಳು ಈ ಕೃತ್ಯ ಎಸಗಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ತಾರಿಗುಡ್ಡೆ ಮನೆ ನಿವಾಸಿ ರಾಧಾಕೃಷ್ಣ (44) ಹಲ್ಲೆಗೆ ಒಳಗಾದವರು. ಅವರು ನೀಡಿದ ದೂರಿನಂತೆ, ಕಿಶೋರ್ ಗೋಳ್ತಮಜಲು, ರಾಕೇಶ್‌ ಪಂಚೋಡಿ, ರೆಹಮಂತ್‌‌, ಇಬ್ರಾಹಿಂ ಕಬಕ, ದೇವಿಪ್ರಸಾದ್ ಹಾಗೂ ಅಶ್ರಫ್‌‌ ಪೆರಾಜೆ ಎಂಬವರ ವಿರುದ್ದ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ದ ಐಪಿಸಿ ಕಲಂ: 143, 147, 148, 307, 324, 427 ಜೊತೆಗ 149 ರಂತೆ ಪ್ರಕರಣ ದಾಖಲಾಗಿದೆ.

ಹಲ್ಲೆ ಕೃತ್ಯವೂ ದರ್ಬೆ ವೃತ್ತದ ಬಳಿಯ ಜಗನ್ನಾಥ ರೈ ಪೆಟ್ರೋಲ್‌‌ ಪಂಪ್‌‌ ಬಳಿ ಆ 24 ರಾತ್ರಿ 8.30 ರ ಸುಮಾರಿಗೆ ನಡೆದಿದೆ. ರಾಧಾಕೃಷ್ಣರವರು ತನ್ನ ಇನ್ನೋವಾ ಕಾರಿಗೆ (ಕೆಎ 04 ಸಿ 1709) ಡೀಸೆಲ್‌‌‌ ಹಾಕಿಸಿ,ಕಾರಿನ ಚಕ್ರಗಳಿಗೆ ಗಾಳಿ ತುಂಬಿಸುತ್ತಿದ್ದಾಗ ಆರೂ ಜನ ಆರೋಪಿಗಳು ಒಂದು ಕಾರು ಮತ್ತು ಎರಡು ಬೈಕಿನಲ್ಲಿ ಆಗಮಿಸಿ ಹಲ್ಲೆ ನಡೆಸಿದ್ದಾರೆ ಹಾಗೂ ಕೊಲೆ ಮಾಡುವ ಉದ್ದೇಶದಿಂದಲೇ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಆರೋಪಿಗಳು ಮಾರಕಾಯುಧಗಳಾದ ಫೈಬರ್‌‌‌‌‌ ಪಾರ್ಕಿಂಗ್‌ ಕೋನ್‌‌‌, ನೋಪಾರ್ಕಿಂಗ್‌‌‌ ಬೋರ್ಡಿನ ಕಬ್ಬಿಣದ ಸ್ಟಾಂಡ್‌‌‌‌, ಹೆಲ್ಮೆಟ್‌‌‌ ಹಾಗೂ ಕಲ್ಲಿನಿಂದ ರಾಧಾಕೃಷ್ಣರವರ ಬೆನ್ನಿಗೆ, ಎಡಗೈ ಮಣಿಗಂಟಿಗೆ, ಹಣೆಯ ಎಡಬದಿಗೆ ಬಲವಾಗಿ ಹಲ್ಲೆ ಮಾಡಿ ರಕ್ತಗಾಯವನ್ನು ಉಂಟು ಮಾಡಿದ್ದಾರೆ ಹಾಗೂ ಇನ್ನೋವಾ ಕಾರನ್ನು ಜಖಂಗೊಳಿಸಿದ್ದಾರೆ. ಹಲ್ಲೆಯಿಂದ ಗಾಯಗೊಂಡ ರಾಧಾಕೃಷ್ಣರವರು ಪುತ್ತೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಲ್ಲೆಗೆ ಕಾರಣ: 2 ವರ್ಷಗಳ ಹಿಂದೆ ನಡೆ ಪುತ್ತೂರಿನ ಸಂಪ್ಯದಲ್ಲಿ ನಡೆದ ಕಾರ್ತಿಕ್‌‌ ಮೇರ್ಲಾ ಕೊಲೆ ಕೇಸಿನ ಪ್ರಮುಖ ಆರೋಪಿಯಾಗಿರುವ ಪ್ರೀತೇಶ್‌‌ ಇನ್ನೂ ಕೂಡ ಜೈಲಿನಲ್ಲಿದ್ದಾನೆ . ಕಾರ್ತಿಕ್ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳಾದ ಕೇಶವ ಸುವರ್ಣ ಮತ್ತು ಪ್ರಮೋದರವರು ನಿನ್ನೆ ರಾಧಾಕೃಷ್ಣರವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಪ್ರಮುಖ ಆರೋಪಿ ಕಿಶೋರನ ಸಂಬಂಧಿಕರು . ಈ ಇಬ್ಬರು ಪ್ರೀತೇಶನ ಪರ ನ್ಯಾಯಾಲಯದಲ್ಲಿ ಸಾಕ್ಷಿ ನುಡಿಯುವಂತೆ ಒಪ್ಪಿಸಲು ರಾಧಾಕೃಷ್ಣ ರವರು ತನ್ನ ಸ್ನೇಹಿತ ಪ್ರಜ್ವಲ್ ಜೊತೆ ಸೇರಿ 3 ದಿಗಳ ಹಿಂದೆ ಬೀರಮಲೆ ಗುಡ್ಡೆಯಲ್ಲಿ ಕಿಶೋರ್ ಜತೆ ಮಾತುಕತೆ ನಡೆಸಿದ್ದಾರೆ.

ಈ ಸಂದರ್ಭಇವರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿರುತ್ತದೆ. ಇದೇ ಸಿಟ್ಟಿನಿಂದ ಆರೋಪಿ ಕಿಶೋರನು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಈ ದಿನ ಈ ಕೃತ್ಯ ನಡೆಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Related Posts

Leave a Reply

Your email address will not be published.