ಕೋವಿಡ್ ಲಸಿಕೆ ಹಂಚಿಕೆಯಲ್ಲಿ ತಾರತಮ್ಯ : ಮೂಡುಬಿದರೆಯಲ್ಲಿ ಕಾಂಗ್ರೆಸ್ನಿಂದ ಪ್ರತಿಭಟನೆ
ಮೂಡುಬಿದಿರೆ: ತಾಲೂಕಿನ ವಿವಿಧ ಕಡೆ ಕೋವಿಡ್ ಲಸಿಕೆ ಕೊಡುವಲ್ಲಿ ತಾರತಮ್ಯವಾಗುತ್ತಿದೆ ಎಂದು ಆರೋಪಿ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಯಿತು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಕೋವಿಡ್ ವ್ಯಾಕ್ಸಿನ್ ವಿಚಾರದಲ್ಲಿ ಶಾಸಕರು, ಬಿಜೆಪಿ ಮುಖಂಡರು ತಾರತಮ್ಯ ಮಾಡುತ್ತಿದ್ದಾರೆ. ಸರ್ಕಾರಿ ಆರೋಗ್ಯ ಕೇಂದ್ರಗಳು, ಪಂಚಾಯಿತಿ ಕಾರ್ಯಾಲಯ ಅಥವಾ ಶಾಲೆಗಳಲ್ಲಿ ಕೋವಿಡ್ ಲಸಿಕೆ ನೀಡಲು ಅವಕಾಶವಿದ್ದರೂ ಯಾವುದೇ ಸೌಕರ್ಯವಿಲ್ಲದ ಖಾಸಗಿ ಜಾಗದಲ್ಲಿ ಲಸಿಕೆಯನ್ನು ನೀಡಲಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳನ್ನು ಬದಿಗಿರಿಸಿ, ಬಿಜೆಪಿ ಮುಖಂಡರು ತಮಗೆ ಬೇಕಾದವರಿಗೆ ಲಸಿಕೆ ನೀಡುವಲ್ಲಿ ಮಗ್ನರಾಗಿದ್ದಾರೆ ಎಂದು ಆರೋಪಿಸಿದರು.
ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಮಾತನಾಡಿ, ಶಾಸಕರು ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರನ್ನು ನಿರ್ಲಕ್ಷಿಸಿ, ತನ್ನ ಚೇಲಾಗಳ ಮುಖಾಂತರ ಲಸಿಕೆ ಹಂಚಿಕೆ ಮಾಡುತ್ತಿದ್ದಾರೆ. ಇದನ್ನು ಕಾಂಗ್ರೆಸ್ ಖಂಡಿಸುತ್ತದೆ ಎಂದು ಹೇಳಿದರು.
ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ, ಪುತ್ತಿಗೆ ಗ್ರಾಪಂ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಮುಖಂಡರಾದ ಪಿ.ಕೆ ಥೋಮಸ್, ಪುರಂದರ ದೇವಾಡಿಗ, ವಾಸುದೇವ ನಾಯಕ್, ಸುರೇಶ್ ಕೋಟ್ಯಾನ್, ಕರೀಂ ಇಕ್ಬಾಲ್, ಜಯ ಕುಮಾರ್ ಶೆಟ್ಟಿ, ರತ್ನಾಕರ ಸಿ.ಮೊಯಿಲಿ, ರಾಜೇಶ್ ಕಡಲಕೆರೆ, ಅರುಣ್ ಕುಮಾರ್ ಶೆಟ್ಟಿ, ಪ್ರಶಾಂತ್, ಮುರಳಿ, ಸವಿತಾ ಮತ್ತಿತರರು ಉಪಸ್ಥಿತರಿದ್ದರು.
ತಹಸೀಲ್ದಾರ್ ಪುಟ್ಟರಾಜ ಅವರಿಗೆ ಮನವಿ ಸಲ್ಲಿಸಲಾಯಿತು.