ಕ್ಯಾಟರಿಂಗ್ ಪಿಕ್‍ಅಪ್ ವಾಹನ ಅಪಘಾತ: ಇಬ್ಬರು ಸಾವು, ಮತ್ತಿಬ್ಬರಿಗೆ ಗಾಯ
ಬಂಟ್ವಾಳ: ಕ್ಯಾಟರಿಂಗ್ ಆಹಾರ ಸಾಗಾಟದ ಪಿಕ್ ಅಪ್ ವಾಹನವೊಂದರ ವೀಲ್ ಎಂಡ್ ತುಂಡಾದ ಪರಿಣಾಮ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟು ಮತ್ತಿಬ್ಬರು ಗಾಯಗೊಂಡಿರುವ ಘಟನೆ ತುಂಬೆ ಸಮೀಪದ ರಾಮಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರವಿವಾರ ಸಂಜೆ ನಡೆದಿದೆ.
ಅಪಘಾತದಲ್ಲಿ ಉಪ್ಪಿನಂಗಡಿ ನಿವಾಸಿಗಳಾದ ಚೇತನ್ (25) ಮತ್ತು ಆಶಿತ್ (21) ಮೃತಪಟ್ಟಿದ್ದಾರೆ. ಸಿಂಚನ್ ಮತ್ತು ಸುದೀಪ್ ಗಾಯಗೊಂಡಿದ್ದಾರೆ. ಇವರ ಪೈಕಿ ಓರ್ವ ಗಂಭೀರ ಗಾಯಗೊಂಡಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಿ.ಸಿ.ರೋಡ್ ಕೈಕಂಬ ಸಮೀಪದ ಮೊಡಂಕಾಪು ಎಂಬಲ್ಲಿನ ಕ್ಯಾಟರಿಂಗ್ ವೊಂದರ ವಾಹನ ಇದಾಗಿದ್ದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮಕ್ಕೆ ಬೆಳಗ್ಗೆ ಆಹಾರ ಪೂರೈಸಿ ಸಂಜೆ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪಿಕ್ ಅಪ್ ನ ವೀಲ್ ಎಂಡ್ ತುಂಡಾಗಿರುವುದು ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಪಿಕ್ ಅಪ್ ವಾಹನ ರಾಮಲಕಟ್ಟೆ ತಲುಪುತ್ತಿದ್ದಂತೆ ರಸ್ತೆಯಲ್ಲಿ ದಿಢೀರ್ ವೃತ್ತಾಕಾರದಲ್ಲಿ ಎರಡು ಸುತ್ತು ತಿರುಗಿದ್ದು ಬಳಿಕ ರಸ್ತೆ ಬದಿಯ ಮರಕ್ಕೆ ಢಿಕ್ಕಿಯಾಗಿ ನಿಂತಿದೆ. ವೃತ್ತಾಕಾರದಲ್ಲಿ ಗಿರುಗಿದ ರಭಸಕ್ಕೆ ಪಿಕ್ ಅಪ್ ಹಿಂಬದಿಯಲ್ಲಿದ್ದ ಮೃತ ಹಾಗೂ ಗಾಯಗೊಂಡ ನಾಲ್ವರೂ ಹೊರಗೆ ಎಸೆಯಲ್ಪಟ್ಟಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತರಲ್ಲಿ ಓರ್ವ ಯುವಕ ವಾಹನದಿಂದ ಎಸೆಯಲ್ಪಟ್ಟ ರಭಸಕ್ಕೆ ರಸ್ತೆ ಪಕ್ಕದ ಡ್ಯಾಂನ ಕಾಂಪೌಂಡ್ ಗೋಡೆ ಹಾರಿ ಡ್ಯಾಂನ ನೀರಿನಲ್ಲಿ ಬಿದ್ದಿದ್ದ ಎಂದು ತಿಳಿದು ಬಂದಿದೆ. ಪಿಕ್ ಅಪ್ ವಾಹನದ ಎದುರು ಇದ್ದ ಚಾಲಕ ಮತ್ತು ಮತ್ತೋರ್ವ ಯಾವುದೇ ಗಾಯಗಳು ಇಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಗಾಯಾಳುಗಳನ್ನು ಕೂಡಲೇ ತುಂಬೆ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ ಇಬ್ಬರು ಅದಾಗಲೇ ಮೃತಪಟ್ಟಿದ್ದರು ಎಂದು ಗಾಯಾಲುಗಳನ್ನು ಆಸ್ಪತ್ರೆಗೆ ಸಾಗಿಸಿದ ತುಂಬೆ ಗ್ರಾಪಂ ಸದಸ್ಯ ಇಬ್ರಾಹೀಂ ಮತ್ತು ಟೆಂಪೋ ಚಾಲಕ ದಾವೂದ್ ತಿಳಿಸಿದ್ದಾರೆ.
ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.