ಕ್ರೀಡಾ ಭಾರತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ : ಆ.31ರಂದು ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ ಕಾರ್ಯಕ್ರಮ
ಮಂಗಳೂರಿನ ಸಂಘನಿಕೇತನದ ಕ್ರೀಡಾ ಭಾರತಿಯ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಮತ್ತು ಕ್ರೀಡಾ ಭಾರತಿ ಧ್ಯಾನ್‍ಚಂದ್ ಖೇಲ್ ರತ್ನ ಪ್ರಶಸ್ತಿ, ಜೀಜಾಬಾಯಿ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಅಗಸ್ಟ್ 31ರಂದು ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾ ಭಾರತಿಯ ಗೌರವಾಧ್ಯಕ್ಷರಾದ ಬಿ. ನಾಗರಾಜ್ ಶೆಟ್ಟಿ ಹೇಳಿದರು.
ಅವರು ಮಂಗಳೂರಿನ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕ್ರೀಡಾ ಭಾರತಿಯು ದೇಶಿಯ ಕ್ರೀಡೆಗಳೊಂದಿಗೆ ಜಾನಪದ ಕ್ರೀಡೆಗಳ ಸಾಧಕರನ್ನು ಗುರುತಿಸುವುದರ ಜೊತೆಗೆ ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳಿಗೆ ಕ್ರೀಡಾ ರಸಪ್ರಶ್ನೆ, ಕ್ರೀಡಾ ಭಾಷಣ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತರನ್ನು ಅರ್ಹತಾ ಪತ್ರ, ಸ್ಮರಣಿಕ ನಗದುಗಳೊಂದಿಗೆ ಗೌರವಪೂರ್ವಕವಾಗಿ ಸನ್ಮಾನಿಸಲಾಗುವುದು. ಅಂತರರಾಷ್ಟ್ರೀಯ ಕಬಡ್ಡೊ ತೀರ್ಪುಗಾರರಾದ ಪ್ರೇಮನಾಥ್ ಉಳ್ಳಾಲ್‍ರವರಿಗೆ ಕ್ರೀಡಾಭಾರತಿ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದೇವೆ. ಹಾಗೆಯೇ ಜಾನಪದ ಕ್ರೀಡೆ ಕಂಬಳದಲ್ಲಿ ಶ್ರೀನಿವಾಸ ಗೌಡ, ಜಾವಲಿನ್ ಎಸೆತದ್ಲಲಿ ಕುಮಾರಿ ರಮ್ಯಶ್ರೀ ಜೈನ್, ಮತ್ತು ಯೋಗ ಸ್ಪರ್ಧೆಯಲ್ಲಿ ಕುಮಾರಿ ಪ್ರಣಮ್ಯ ಸಿ.ಎ ಅಮೋಘ ಸಾಧನೆ ಮಾಡಿದ್ದು, ಇವರಿಗೆ ಕ್ರೀಡಾಭಾರತಿ ಜೀಜಾಬಾಯಿ ಪ್ರಶಸ್ತಿ ಪ್ರದಾನ ಮಾಡಲಿದ್ದೇವೆ ಎಂದು ಹೇಳಿದರು.
ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕ್ರೀಡಾಭಾರತಿಯ ಅಧ್ಯಕ್ಷರಾದ ಕಾರ್ಯಪ್ಪ ರೈ, ಸಂಯೋಜಕರಾದ ಭೋಜರಾಜ್ ಕಲ್ಲಡ್ಕ, ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರು, ಕಾರ್ಯದರ್ಶಿ ಹರೀಶ್ ರೈ, ಕರುಣಾಕರ್ ಶೆಟ್ಟಿ, ಹೇಮಪ್ರಭಾ ಉಪಸ್ಥಿತರಿದ್ದರು.