ಗ್ರಾಹಕರ ಬಳಿ ಮ್ಯಾನೇಜರ್ ಉಡಾಫೆ ವರ್ತನೆ ಆರೋಪ: ಹಟ್ಟಿಯಂಗಡಿ ಬ್ಯಾಂಕ್ ಗೆ ಮುತ್ತಿಗೆ ಹಾಕಿ ಆಕ್ರೋಶ

ಕುಂದಾಪುರ: ಮಗಳ ಉನ್ನತ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಾಲ ಕೇಳಲು ಹೋದಾಗ ಮ್ಯಾನೇಜರ್ ಸಮರ್ಪಕ ಮಾಹಿತಿ ನೀಡದೇ ಉಡಾಫೆಯಾಗಿ ನಡೆದುಕೊಂಡಿದ್ದಾರೆಂದು ಆರೋಪಿಸಿ ಹಟ್ಟಿಯಂಗಡಿ ಕರ್ನಾಟಕ ಬ್ಯಾಂಕಿಗೆ ಆಗಮಿಸಿದ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಹಟ್ಟಿಯಂಗಡಿ ನಿವಾಸಿ ನಾಗರಾಜ ಪೂಜಾರಿ ಎನ್ನುವವರು ತಮ್ಮ ಮಗಳ ಉನ್ನತ ವಿದ್ಯಾಭ್ಯಾಸದ ಸಲುವಾಗಿ ಎಜುಕೇಶನ್ ಲೋನ್ ಕೇಳಲು ಮಂಗಳವಾರ ಕರ್ನಾಟಕ ಬ್ಯಾಂಕ್ ಹಟ್ಟಿಯಂಗಡಿ ಶಾಖೆಗೆ ತೆರಳಿದ್ದರು. ಈ ವೇಳೆ ಬ್ಯಾಂಕ್ ಮ್ಯಾನೇಜರ್ ಸಮರ್ಪಕ ಮಾಹಿತಿ ನೀಡದೇ ವಾಪಾಸ್ ಕಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಯಾವೊಬ್ಬ ಗ್ರಾಹಕರಿಗೂ ಸಮಸ್ಯೆಯಾಗಬಾರದು, ಗ್ರಾಹಕರೊಡನೆ ಸೌಜನ್ಯಯುತವಾಗಿ ವರ್ತಿಸಬೇಕೆಂದು ನಾಗರಿಕರು ಆಗ್ರಹಿಸಿದರು.

ನಾಗರಿಕರು ಹಾಗೂ ಬ್ಯಾಂಕ್ ಸಿಬ್ಬಂದಿಗಳ ಬಳಿ ಹಟ್ಟಿಯಂಗಡಿ ಶ್ರೀ ಸಿದ್ದಿ ವಿನಾಯಕ ದೇವಸ್ಥಾನದ ಧರ್ಮದರ್ಶಿ ಬಾಲಚಂದ್ರ ಭಟ್ ಮಾತನಾಡಿ ನಾಗರಿಕರನ್ನು ಸಮಾಧಾನ ಪಡಿಸಿದರು. ಮುಂದಿನ ದಿನದಲ್ಲಿ ಇಂತಹ ಸಮಸ್ಯೆಯಾಗುವುದಿಲ್ಲ ಗ್ರಾಹಕರು ಹಾಗೂ ಬ್ಯಾಂಕ್ ಸಿಬ್ಬಂದಿಗಳು ಪರಸ್ಪರ ಅನ್ಯೋನ್ಯತೆಯಿಂದ ವ್ಯವಹರಿಸಿದಲ್ಲಿ ಏಳಿಗೆ ಸಾಧ್ಯ ಎಂದರು.

ಗ್ರಾಹಕರ ಪರವಾಗಿ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ, ಪ್ರಶಾಂತ್ ಪೂಜಾರಿ ಕರ್ಕಿ, ಗ್ರಾ.ಪಂ ಮಾಜಿ ಸದಸ್ಯ ಮುತ್ತಯ್ಯ ಪೂಜಾರಿ ಮಾತನಾಡಿದರು. ನಾಗರಾಜ ಪೂಜಾರಿ ತನಗಾದ ನೋವು ತೋಡಿಕೊಂಡರು.

ಹಟ್ಟಿಯಂಗಡಿ ಗ್ರಾ.ಪಂ ಅಧ್ಯಕ್ಷೆ ಅಮೃತಾ ಶೆಟ್ಟಿ, ಸದಸ್ಯರಾದ ಸಂತೋಷ್ ಶೆಟ್ಟಿ ಸಬ್ಲಾಡಿ, ಮಂಜುನಾಥ್ ಸಬ್ಲಾಡಿ, ಚಂದ್ರ ಮೊಗವೀರ, ಗುಲ್ವಾಡಿ ಗ್ರಾ.ಪಂ ಸದಸ್ಯ ಚಂದ್ರ ಪೂಜಾರಿ, ಸ್ಥಳೀಯರಾದ ಸುದರ್ಶನ, ಸತೀಶ್ ದೇವಾಡಿಗ, ನಟೇಶ್ ಪೂಜಾರಿ ಹಟ್ಟಿಕುದ್ರು ಇದ್ದರು.

Related Posts

Leave a Reply

Your email address will not be published.