ಜಂಕ್ ಫುಡ್ ಬಳಕೆಯಿಂದ ಕ್ಯಾನ್ಸರ್ಗೆ ಮುನ್ನುಡಿ : ಡಾ| ಅನುಷಾ ಎಚ್ಚರಿಕೆ
ಮೂಡುಬಿದಿರೆ: “ಮೈದಾ, ಜೋಳದ ಹಿಟ್ಟು, ಪುಡಿ ಉಪ್ಪು, ಸಕ್ಕರೆ ಈ ನಾಲ್ಕು ಬಗೆಯ ಬಿಳಿ ವಿಷವಸ್ತುಗಳನ್ನು ಹೊಂದಿರುವ ಆಹಾರ ವಸ್ತುಗಳಿಂದ ದೂರವಿರಿ. ಜಂಕ್ ಫುಡ್ ಸೇವನೆಯಿಂದ ಕ್ಯಾನ್ಸರ್ಗೆ ಬಲಿಯಾಗುವ ಅಪಾಯವಿದೆ ಎಂದು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯ ಹೋಮಿಯೋಪತಿ ವಿಭಾಗದ ಡಾ.ಅನುಷಾ ಎಚ್ಚರಿಸಿದರು.
ಅಲಂಗಾರು ಸಂತ ಥೋಮಸ್ ಶಾಲಾಸಭಾಂಗಣದಲ್ಲಿ ಮಂಗಳೂರು ಸಿಓಡಿಪಿ ಮೂಡುಬಿದಿರೆ ಪ್ರಗತಿ ಮಹಾಸಂಘ, ಮಂಗಳೂರು ಲಯನ್ಸ್ ಕ್ಲಬ್ ಇವುಗಳ ಆಶ್ರಯದಲ್ಲಿ ಫಾದರ್ ಮುಲ್ಲಾರ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಸಭಾ ಕಾರ್ಯಕ್ರಮದಲ್ಲಿ ಅವರು ಆಹಾರ ಸ್ವರೂಪ ಮತ್ತು ಕ್ಯಾನ್ಸರ್ ಕುರಿತು ಮಾತನಾಡಿ, “ ಆದಷ್ಟು ತರಕಾರಿ, ಹಣ್ಣುಹಂಪಲು, ನಾರಿನಂಶವಿರುವ ಆಹಾರ ಸೇವಿಸಿ ಆರೋಗ್ಯವಂತರಾಗಿ ಬದುಕಲು ಕಲಿಯಿರಿ” ಎಂದು ಕರೆ ನೀಡಿದರು. ಪ್ರಗತಿ ಮಹಾಸಂಘದ ಅಧ್ಯಕ್ಷೆ ಮಾರ್ಗರೆಟ್ ಮಸ್ಕರೇನ್ಹಸ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಮಂಗಳೂರು ಲಯನ್ಸ್ ಕ್ಲಬ್ ಅಧ್ಯಕ್ಷ ಲೆಸ್ಲಿ ಡಿ’ಸೋಜಾ, ಸಿಓಡಿಪಿ ಮಹಿಳಾ ಸಬಲೀಕರಣ ಸಂಯೋಜಕಿ ಲಿಡಿಯಾ ಮೊರಾಸ್ ಮತ್ತಿತರರು ಉಪಸ್ಥಿತರಿದ್ದರು.