ಜನರಿಗೆ ಆತಂಕ ಮೂಡಿಸುವ ಹೇಳಿಕೆ ಕೊಡುವುದನ್ನು ನಿಲ್ಲಿಸಲಿ: ಕುಂದಾಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್
ಕುಂದಾಪುರ: ಕೆಆರ್ಎಸ್ ಅಣೆಕಟ್ಟಿನ ಮಾಮೂಲಿ ನಿರ್ವಹಣೆಯ ಕಾಮಗಾರಿಗಾಗಿ ಹಣ ಬಿಡುಗಡೆ ಆಗಿರಬಹುದು. ಬಿರುಕು ಹಾಗೂ ಇನ್ನಿತರ ತಾಂತ್ರಿಕ ಮಾಹಿತಿಗಳನ್ನು ನೀಡಲು ಪರಿಣಿತ ತಾಂತ್ರಿಕ ತಜ್ಙರ ವಿಭಾಗವೇ ಇದೆ. ಅವರ ವರದಿ ಹಾಗೂ ಸಲಹೆ ಆಧಾರದಲ್ಲಿಯೇ ಕಾಮಗಾರಿಗಳು ನಡೆಯುತ್ತದೆ. ಸುಮ್ಮನೆ ಜನರಿಗೆ ಆತಂಕ ಮೂಡಿಸುವುದು ಹಾಗೂ ಪ್ರಚಾರಕ್ಕಾಗಿ ಹೇಳಿಕೆ ನೀಡುವುದನ್ನು ಎಲ್ಲರೂ ನಿಲ್ಲಿಸುವುದು ಸೂಕ್ತ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅಭಿಪ್ರಾಯಪಟ್ಟರು.
ಅವರು ಬೀಜಾಡಿಯ ಕಡಲ ಕಿನಾರೆಯ ಸನ್ ಕ್ಯಾಸ್ಟಲ್ ಹೋಂ ಸ್ಟೇ ಯಲ್ಲಿ ಡಿಕೆಶಿ ಜನ ಸಂಪನ್ಮೂಲ ಸಚಿವರಾಗಿದ್ದಾಗ ಕೆಆರ್ಎಸ್ ಅಣೆಕಟ್ಟಿನ ದುರಸ್ತಿಗಾಗಿ ಹಣ ಬಿಡುಗಡೆ ಮಾಡಿದ್ದಾರೆ ಎನ್ನುವ ಸಂಸದೆ ಸುಮಲತಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ರಾಜ್ಯಕ್ಕೆ ಬರಬೇಕಾದ ಜಿಎಸ್ಟಿ ಬಾಕಿ ಹಣವನ್ನು ನೀಡಲು ರಾಜ್ಯದಿಂದ ಆಯ್ಕೆಯಾಗಿರುವ 25 ಸಂಸದರು ಯಾವುದೇ ಪ್ರಯತ್ನ ಮಾಡುತ್ತಿಲ್ಲ. ರಾಜ್ಯದ ಹಿತಾಸಕ್ತಿ ಕಾಯಬೇಕಾದ ಅವರು ಬಾಯಿಗೆ ಬಟ್ಟೆ ಕಟ್ಟಿಕೊಂಡಿದ್ದಾರೆ. ರಾಜ್ಯದ ಜನತೆಯ ಮತವನ್ನು ಪಡೆದು ಲೋಕಸಭೆಗೆ ಹೋಗಿರುವ ಅವರು ರಾಜ್ಯಕ್ಕೆ ದ್ರೋಹ ಮಾಡುತ್ತಿದ್ದಾರೆ. ಬಾಕಿ ಹಣ ನೀಡುವಂತೆ ಹೋರಾಟ ನಡೆಸಬೇಕಾದ ವಿತ್ತ ಸಚಿವೆ ಸೇರಿದಂತೆ ಆಡಳಿತ ಪಕ್ಷದ ಸಂಸದರು ಈ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂದು ಡಿಕೆಶಿ ಆರೋಪಿಸಿದರು.
ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಮೀಸಲಾತಿ ಬಗ್ಗೆ ಸಚಿವ ಯೋಗೀಶ್ವರ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು ಚುನಾವಣೆಗಳೇ ಇನ್ನೂ ಬಂದಿಲ್ಲ. ಅದರ ಬಗ್ಗೆ ಈಗ ಮಾತನಾಡುವುದಿಲ್ಲ. ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹಾಕಿ ಅವರು ಗೆಲ್ಲಿಸಿಕೊಳ್ಳಲಿ. ಅವರೆಲ್ಲಾ ನಮ್ಮ ಹೆಸರು ಹೇಳಿದರೇ ದೊಡ್ಡ ನಾಯಕರಾಗ್ತಾರೆ ಎನ್ನುವ ಭ್ರಮೆಯಲ್ಲಿ ಇರುವುದರಿಂದ ನಮ್ಮ ಹೆಸರನ್ನು ಹೇಳುತ್ತಾ ಇರುತ್ತಾರೆ. ಅವರ ಹೇಳಿಕೆಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದರು.
ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವೇ ಇಲ್ಲ!
ಕರಾವಳಿ ಭಾಗದಲ್ಲಿ ಮೀನುಗಾರರು, ಮೂರ್ತೇದಾರರು ಸೇರಿದಂತೆ ಎಲ್ಲ ವರ್ಗದ ಜನರಿಗೆ ನ್ಯಾಯ ಕೊಡಿಸುವ ಬಗ್ಗೆ ಕಾಂಗ್ರೆಸ್ ಹೋರಾಟ ನಡೆಸುತ್ತದೆ. ಬಿಪಿಎಲ್ ಪಡಿತರ ಚೀಟಿ ಇದ್ದವರನ್ನು ಎಪಿಎಲ್ ಕಾರ್ಡ್ಗೆ ಬದಲಾಯಿಸಿದ್ದಾರೆ. ಇದರಿಂದ ಸರ್ಕಾರದ ಸವಲತ್ತುಗಳನ್ನು ಅಥವಾ ರಿಯಾಯಿತಿಗಳನ್ನು ಪಡೆದುಕೊಳ್ಳಲು ಆಗುತ್ತಿಲ್ಲ ಎಂದು ಬಡವರು ಕಣ್ಣೀರು ಸುರಿಸುತ್ತಿದ್ದಾರೆ. ಬಡವರ ದುಖ: ದುಮ್ಮಾನಗಳನ್ನು ಆಲಿಸದೆ ಇರುವ ಈ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯವೇ ಇಲ್ಲ ಎಂದು ಡಿಕೆಶಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಯತ್ನಾಳ್ ಅವರನ್ನು ಮಾನಸಿಕ ಆಸ್ಪತ್ರೆಗೆ ಸೇರಿಸಲು ಕಾಳಜಿ ವಹಿಸುತ್ತಿಲ್ಲ!: ಡಿಕೆಶಿ
ನಾನು ಯಾರ ಜತೆ ಸಂಪರ್ಕ ಇಟ್ಟುಕೊಂಡಿದ್ದೇನೆ ಎನ್ನುವುದನ್ನು ಯಾರಿಗೂ ಖಾತ್ರಿಪಡಿಸುವ ಅವಶ್ಯಕತೆಗಳಿಲ್ಲ. ನಾನುಂಟು ಕಾಂಗ್ರೆಸ್ ಉಂಟು, ನಾನುಂಟು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಂಟು. ನನ್ನ ವಿರುದ್ದ ಆರೋಪರಹಿತ, ಬೇಜಾವ್ದಾರಿ ಹಾಗೂ ಉಡಾಫೆ ಹೇಳಿಕೆಯನ್ನು ನೀಡುತ್ತಿರುವ ಯತ್ನಾಳ್ ವಿರುದ್ದ ಈಗಾಗಲೇ ೨೦೪ ಕೋಟಿ ರೂ. ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ ಅವರು ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದರು. ಪಕ್ಷದ ಗೊಂದಲಗಳಿಂದಾಗಿ ಸ್ವಲ್ಪ ಮಾನಸಿಕ ಅಸ್ವಸ್ಥರಾಗಿರುವ ಯತ್ನಾಳ್ ಅವರನ್ನು ಆಸ್ಪತ್ರೆಗೆ ಸೇರಿಸಲು ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಕಾಳಜಿ ವಹಿಸುತ್ತಿಲ್ಲ ಎಂದರು.
ಬೈಂದೂರಿನ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕೆಪಿಸಿಸಿ ಪದಾಧಿಕಾರಿ ರಘುನಂದನ್, ಬೆಂಗಳೂರಿನ ಉದ್ಯಮಿ ಯು.ಬಿ.ಶೆಟ್ಟಿ, ತಾಲ್ಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ, ಸಹನಾ ಗ್ರೂಪ್ಸ್ ಪ್ರವರ್ತಕ ಸುರೇಂದ್ರ ಶೆಟ್ಟಿ, ಮೀನುಗಾರ ಮುಖಂಡ ಮದನಕುಮಾರ ಉಪ್ಪುಂದ, ಕುಂದಾಪುರ ಪುರಸಭಾ ಸದಸ್ಯ ಕೆ.ಜಿ.ನಿತ್ಯಾನಂದ ಇದ್ದರು.