HomeFresh News‘ಪ್ರೇರಣಾ ದಿವಸ್-26’ ತ್ರಿಶಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸ್ಥಾಪಕರಿಗೆ ಅತ್ಯುತ್ತಮ ಅಡ್ಮಿನಿಸ್ಟ್ರೇಷನ್ ಪ್ರಶಸ್ತಿ ಪ್ರದಾನ

‘ಪ್ರೇರಣಾ ದಿವಸ್-26’ ತ್ರಿಶಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ಸ್ಥಾಪಕರಿಗೆ ಅತ್ಯುತ್ತಮ ಅಡ್ಮಿನಿಸ್ಟ್ರೇಷನ್ ಪ್ರಶಸ್ತಿ ಪ್ರದಾನ

ಕಟಪಾಡಿ:ಶಿಕ್ಷಕರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವುದರ ಜೊತೆಗೆ ಸಮಾಜದ ಅಭಿವೃದ್ಧಿ, ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ ಎಂದು ತ್ರಿಶಾ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನ ಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಹೇಳಿದರು.
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ರಿ.) ಆಯೋಜಿಸಿದ್ದ ‘ಪ್ರೇರಣಾ ದಿವಸ್-26’ ಕಾರ್ಯಕ್ರಮದಲ್ಲಿ ‘ಅತ್ಯುತ್ತಮ ಅಡ್ಮಿನಿಸ್ಟ್ರೇಷನ್ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕ ವೃತ್ತಿಯ ಮಹತ್ವ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣ ಮತ್ತು ಶಿಕ್ಷಣ ಕ್ಷೇತ್ರದ ಜವಾಬ್ದಾರಿಗಳ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.


ಶಿಕ್ಷಕನಾಗಿ ನಿರಂತರವಾಗಿ ಕಲಿಯುತ್ತಾ, ಕಲಿತ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯಲು ಪ್ರಯತ್ನಿಸುತ್ತಿದ್ದೇನೆ. ತನಗೆ ದೊರೆತ ಈ ಗೌರವವು ಕೇವಲ ಸಾಧನೆಗೆ ಸಿಕ್ಕ ಪ್ರಶಸ್ತಿಯಲ್ಲ, ಬದಲಾಗಿ ಕರ್ತವ್ಯವನ್ನು ಇನ್ನಷ್ಟು ಜವಾಬ್ದಾರಿಯಿಂದ ನಿರ್ವಹಿಸಲು ಪ್ರೇರಣೆ ನೀಡುವ ಗೌರವವಾಗಿದೆ ಎಂದು ಅವರು ಹೇಳಿದರು.
ವೈದ್ಯರು, ರಾಜಕಾರಣಿಗಳು, ಸೈನಿಕರು, ಕೃಷಿಕರು, ಸಮಾಜ ಸೇವಕರು ಸೇರಿದಂತೆ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವವರ ಹಿಂದೆ ಶಿಕ್ಷಕರ ಮಾರ್ಗದರ್ಶನವಿರುತ್ತದೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಗುರುತಿಸಿ, ಅವರಿಗೆ ಸೂಕ್ತ ದಿಕ್ಕು ತೋರಿಸುವ ಮೂಲಕ ಶಿಕ್ಷಕರು ಉಜ್ವಲ ಭವಿಷ್ಯ ನಿರ್ಮಿಸಬಲ್ಲರು ಎಂದು ಅಭಿಪ್ರಾಯಪಟ್ಟರು.


ಗೂಗಲ್ ಮತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನಗಳ ಮೂಲಕ ಜ್ಞಾನ ಪಡೆಯಬಹುದಾದರೂ, ಅವುಗಳ ಮೇಲಿನ ಅತಿಯಾದ ಅವಲಂಬನೆಯಿಂದ ಆಲಸ್ಯ ಬೆಳೆಸಿಕೊಳ್ಳಬಾರದು. ಶಿಕ್ಷಕರು ವಿದ್ಯಾರ್ಥಿಗಳ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ, ಅವರ ವ್ಯಕ್ತಿತ್ವ ವಿಕಸನಕ್ಕೆ ಮಾರ್ಗದರ್ಶನ ನೀಡಬೇಕು. ಸಮಸ್ಯೆಗಳನ್ನು ಗುರುತಿಸುವುದರ ಜೊತೆಗೆ ಅವುಗಳಿಗೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳುವ ಸಾಮರ್ಥ್ಯವನ್ನೂ ವಿದ್ಯಾರ್ಥಿಗಳಲ್ಲಿ ಬೆಳೆಸಬೇಕು ಎಂದು ಕರೆ ನೀಡಿದರು.
ಸಂಸ್ಕೃತಿ, ಆಹಾರ, ಆರೋಗ್ಯ ಮತ್ತು ಮಾನವೀಯ ಮೌಲ್ಯಗಳ ಸಂರಕ್ಷಣೆಯಲ್ಲಿ ಶಿಕ್ಷಕರು ಭರವಸೆಯಾಗಿ ಕಾರ್ಯನಿರ್ವಹಿಸಬೇಕು. ಸಮಾಜದಲ್ಲಿ ಒಳ್ಳೆಯತನವನ್ನು ಬೆಳೆಸುವ ಮತ್ತು ಕೆಟ್ಟ ಪ್ರವೃತ್ತಿಗಳಿಂದ ದೂರವಿರುವ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದು ಶಿಕ್ಷಣದ ಪ್ರಮುಖ ಉದ್ದೇಶವಾಗಬೇಕು ಎಂದು ಹೇಳಿದರು.
ತ್ರಿಶಾ ಸಂಸ್ಥೆಯ ಧ್ಯೇಯೋದ್ದೇಶಗಳನ್ನು ವಿವರಿಸಿದ ಅವರು, ಜ್ಞಾನದ ಬಯಕೆಯಿಂದ ಸಂಸ್ಥೆಗೆ ಬರುವ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವುದು ತಮ್ಮ ಮುಖ್ಯ ಗುರಿಯಾಗಿದೆ. ವಿದ್ಯಾರ್ಥಿಗಳು ಆರ್ಥಿಕವಾಗಿ ಸಬಲರಾಗಿ, ಆರೋಗ್ಯಕರ ಜೀವನ ನಡೆಸುವುದರೊಂದಿಗೆ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕುವುದು ಸಂಸ್ಥೆಗೆ ದೊಡ್ಡ ಪ್ರೇರಣೆಯಾಗಿದೆ ಎಂದರು.
ತ್ರಿಶಾ ಸಂಸ್ಥೆಯ ಬೆಳವಣಿಗೆಯ ಹಿಂದೆ ತಮ್ಮೊಬ್ಬರ ಪ್ರಯತ್ನ ಮಾತ್ರವಿಲ್ಲ; ತ್ರಿಶಾ ಪರಿವಾರದ ಸದಸ್ಯರ ತ್ಯಾಗ, ಪರಿಶ್ರಮ ಮತ್ತು ಸಾಧನೆಯ ಕೊಡುಗೆ ಇದೆ ಎಂದು ಸಿಎ ಗೋಪಾಲಕೃಷ್ಣ ಭಟ್ ಸ್ಮರಿಸಿದರು.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments