ಜಿಲ್ಲೆಯಲ್ಲಿ ವೀಕೆಂಡ್ ಮನರಂಜನೆಗೆ ಚಿಂತನೆ : ಜಿಲ್ಲಾಧಿಕಾರಿ

ತಣ್ಣೀರುಬಾವಿ, ಪಣಂಬೂರು ಸೇರಿದಂತೆ ದ.ಕ. ಜಿಲ್ಲೆಯ ಬೀಚ್‍ಗಳಲ್ಲಿ ಮೂಲಭೂತ ಸೌಕರ್ಯದೊಂದಿಗೆ ಪ್ರವಾಸಿಗರನ್ನು ಸೆಳೆಯಲು ವಿಭಿನ್ನ ರೀತಿಯ ಕ್ರಮಗಳನ್ನು ರೂಪಿಸಲಾಗಿದೆ. ಪ್ರವಾಸಿಗರಿಗೆ ಮಂಗಳೂರಿನ ಒಳಗಡೆ ಇರುವ ಬೀಚ್‍ಗಳನ್ನು ಸಂಪರ್ಕಿಸಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆ ಬಗ್ಗೆ ಸೆ.27ರಂದು ಪ್ರವಾಸೋದ್ಯಮ ದಿನದ ಅಂಗವಾಗಿ ನಡೆಯುವ ಸಭೆಯಲ್ಲಿ ಚರ್ಚಿಸಲಾಗುವುದು. ಬೀಚ್‍ಗಳಿಗೆ ಆಗಮಿಸುವವರಿಗೆ ಶೌಚಾಲಯ, ವಿಶ್ರಾಂತಿ ಕೊಠಡಿ ಜತೆಗೆ ಹೊಟೇಲ್ ಮಾದರಿಯ ಊಟೋಪಾಚರ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ದ.ಕ. ಜಿಲ್ಲಾ ಕಾರ್ಯನಿರತರ ಪತ್ರಕರ್ತರ ಸಂಘದ ವತಿಯಿಂದ ಇಂದು ಆಯೋಜಿಸಲಾದ ಜಿಲ್ಲಾಧಿಕಾರಿ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.
ಕೊರೋನ 2ನೇ ಅಲೆ ತಗ್ಗುತ್ತಿರುವಂತೆಯೇ ಜಿಲ್ಲೆಯಲ್ಲಿ ಸ್ಥಳೀಯ ಕಲಾವಿದರು ಹಾಗೂ ವ್ಯಾಪಾರಿಗಳಿಗೆ ವೇದಿಕೆಯ ಜತೆಗೆ ಜಿಲ್ಲೆಯ ಜನರಿಗೆ ವೀಕೆಂಡ್ ಮನೋರಂಜನೆಗೆ ಜಿಲ್ಲಾಡಳಿತ ಯೋಜನೆ ರೂಪಿಸಿದೆ. ವಾರಾಂತ್ಯದ ದಿನಗಳಲ್ಲಿ ನಿಗದಿತ ರಸ್ತೆಯುದ್ದಕ್ಕೂ ಸ್ಥಳೀಯ ಆಹಾರ, ಕರಕುಶಲ ವಸ್ತುಗಳು ಸೇರಿದಂತೆ ತಾತ್ಕಾಲಿಕ ವ್ಯಾಪಾರ ಮಳಿಗೆಗಳು ಹಾಗೂ ಸ್ಥಳೀಯ ಕಲಾವಿದರಿಂದ ಮನೋರಂಜನಾ ಕಾರ್ಯಕ್ರಮಗಳ ಮೂಲಕ ಜನರಿಗೆ ಮನೋರಂಜನೆಯ ಜತೆಗೆ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಈ ಉತ್ಸವ ವರ್ಷಪೂರ್ತಿ ನಿರಂತರವಾಗಿ ವಾರಾಂತ್ಯದಲ್ಲಿ ನಡೆಸಲು ಚಿಂತನೆ ಮಾಡಲಾಗಿದೆ. ಕೊರೋನ ಪಾಸಿಟಿವಿಟಿ ದರ ಇನ್ನಷ್ಟು ಕಡಿಮೆಯಾಗುವ ಜತೆಗೆ ಮೂರನೇ ಅಲೆಯ ಆತಂಕವಿಲ್ಲದಿದ್ದರೆ ಇದನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಬೆಂಗ್ರೆ ಬೀಚ್‍ನಲ್ಲಿ ಗಾಲ್ಫ್ ಕಾರ್ಸ್‍ಗಾಗಿ 2007-08ನೆ ಸಾಲಿನಲ್ಲಿ ಓಪಸ್ ಲಗೂನಾ ಸಂಸ್ಥೆ ಟೆಂಡರ್ ವಹಿಸಿದ್ದು, ಸಂಸ್ಥೆಗೆ ಇದೀಗ ಸಿಆರ್‍ಝೆಡ್ ಅನುಮತಿ ದೊರಕಿದೆ. ಇಲ್ಲಿ ಜಮೀನು ಒತ್ತುವರಿ ಸಮಸ್ಯೆ ಇರುವುದರಿಂದ ಅದಕ್ಕೆ ಸೂಕ್ತ ಕ್ರಮಗಳೊಂದಿಗೆ ರೆಸಾರ್ಟ್ ಮಾದರಿಯಲ್ಲಿ ಅಭಿವೃದ್ದಿ ಪಡಿಸಿದಾಗ ಸ್ಥಳೀಯ ಸುಮಾರು 800 ಮಂದಿಗೆ ಉದ್ಯೋಗವೂ ದೊರಕಲಿದೆ. ಈ ಕುರಿತಂತೆ ಕಳೆದ ಎರಡು ತಿಂಗಳ ಅವಧಿಯಲ್ಲಿ 6 ಸಭೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದರು.

ಪಿಲಿಕುಳ ಜೈವಿಕ ಉದ್ಯಾನನವಾಗಿದ್ದು, ನೈಸರ್ಗಿಕ ರೀತಿಯಲ್ಲಿ ಇಲ್ಲಿ ಪ್ರಾಣಿ, ಪಕ್ಷಿಗಳ ವಾಸಕ್ಕೆ ಅವಕಾಶವಿದೆ. ಈಗಿರುವ ವನ್ಯಜೀವಿಗಳಿಗೆ ವಿಶೇಷ ಆಕರ್ಷಣೆಯಾಗಿ ಜಿರಾಫೆ, ಜೀಬ್ರಾ ಹಾಗೂ ಆನೆಗಳನ್ನು ಸೇರ್ಪಡೆಗೊಳಿಸಲು ಚಿಂತಿಸಲಾಗಿದೆ. ಇದೇ ವೇಳೆ ಜಿಲ್ಲೆಯ ಪ್ರಮುಖ ಆಕರ್ಷಣೆಯಾದ ಕಂಬಳವನ್ನು ಪಿಲಿಕುಳದಲ್ಲಿ ಮತ್ತೆ ನಡೆಸುವುದು, ನದಿ ಉತ್ಸವವನ್ನು ಆರಂಭಿಸುವ ಬಗ್ಗೆಯೂ ಆಲೋಚನೆ ಇದೆ.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ಇಂದಾಜೆ ಸ್ವಾಗತಿಸಿದರು. ಹರೀಶ್ ಮೋಟುಕಾನ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.