ಜುಲೈ 9 ರಂದು  ಸಾಗರ ಮಾಲಾ ಯೋಜನೆಯ ವಿರುದ್ದ ಮೀನುಗಾರರಿಂದ ‘ದೋಣಿಯೊಂದಿಗೆ ಪ್ರತಿಭಟನೆ’

ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಸಾಗರ ಮಾಲಾ ಯೋಜನೆ ಕರ್ನಾಟಕ ಕರಾವಳಿ ಜಿಲ್ಲೆಗಳ ಮೀನುಗಾರ ಸಮುದಾಯದಲ್ಲಿ ಆತಂಕವನ್ನು ಸೃಷ್ಟಿಸುತ್ತಿದೆ. ಮಂಗಳೂರು ಬೆಂಗರೆಯ ಪಲ್ಗುಣಿ ನದಿ ದಂಡೆಯಲ್ಲಿ ಸಾಗರ ಮಾಲಾ ಯೋಜನೆಯಡಿ ದೇಶೀಯ ಹಡಗುಗಳ ನಿಲುಗಡೆಗಾಗಿ ಕೋಸ್ಟಲ್ ಬರ್ತ್ ನೂರು ಕೋಟಿ ರೂಪಾಯಿ ವೆಚ್ಚದಲ್ಲಿ‌ ನಿರ್ಮಾಣಗೊಳ್ಳುತ್ತಿದೆ. ಇದು ಸ್ಥಳೀಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಬಲವಾದ ಪೆಟ್ಟು ನೀಡುತ್ತದೆ, ದುಡಿಮೆಯ ಅವಕಾಶವನ್ನು ನಾಶಗೊಳಿಸುತ್ತದೆ. ಮೀನುಗಾರರ ಬದುಕಿಗೆ ಮಾರಕವಾದ ಈ ಯೋಜನೆ ಕೈ ಬಿಡಬೇಕು ಎಂದು ಆಗ್ರಹಿಸಿ ಸ್ಥಳೀಯ ಸಾಂಪ್ರದಾಯಿಕ ಮೀನುಗಾರರು ಜುಲೈ 9 ರಂದು “ದೋಣಿಯೊಂದಿಗೆ ಪ್ರತಿಭಟನೆ, ಹಾಗೂ ಮೀನುಗಾರರ ಮನೆಗಳಲ್ಲಿ ಪ್ರತಿಭಟನೆ” ನಡೆಸಲಿದ್ದಾರೆ.

ಈಗಾಗಲೆ ಕಾರವಾರ, ಹೊನ್ನಾವರ ಮೊದಲಾದೆಡೆ ಸಾಗರ ಮಾಲಾ ಯೋಜನೆಯ ಅಪಾಯಗಳ ವಿರುದ್ದ ಧ್ವನಿ ಎತ್ತಿದ ಮೀನುಗಾರರ ಮೇಲೆ ಸರಕಾರ ಬಲಪ್ರಯೋಗ ನಡೆಸುತ್ತಿದೆ. ಬೇರೆ ಬೇರೆ ಹೆಸರುಗಳಲ್ಲಿ ಕರ್ನಾಟಕದ ಸಮುದ್ರ ತೀರದ ಉದ್ದಕ್ಕೆ ಸಾಗರ ಮಾಲಾ ಅಡಿಯಲ್ಲಿ ಹಲವು ಯೋಜನೆಗಳನ್ನು ತರಲು ಸರಕಾರಗಳು ನಿರ್ಧರಿಸಿವೆ. ಸಾಗರ ಮಾಲಾ ಹಾಗೂ ಅದರಡಿ ರೂಪುಗೊಳ್ಳುತ್ತಿರುವ ಯೋಜನೆಗಳೆಲ್ಲವೂ ಮೀನುಗಾರರ ವೃತ್ತಿ ಹಾಗೂ ವಸತಿಗಳ ಪಾಲಿಗೆ ಜಾರಿಯ ಸಂದರ್ಭ ಕಂಟಕವಾಗಲಿವೆ. ಈಗಾಗಲೆ ಜಾರಿಗೆ ಮುಂದಾಗಿರುವ ಕಾರವಾರ, ಹೊನ್ನಾವರ, ಮಂಗಳೂರಿನ ಬೆಂಗರೆ ಪ್ರದೇಶದಲ್ಲಿ ಇದು ಸ್ಪಷ್ಟಗೊಂಡಿವೆ‌. ಸಾಗರ ಮಾಲಾ ಯೋಜನೆಯ ಒಟ್ಟು ಸ್ವರೂಪವೇ ಪಾರಂಪರಿಕವಾಗಿ ಶತಮಾನಗಳಿಂದ ಮೀನುಗಾರಿಕೆ ನಡೆಸುತ್ತಾ ಬಂದಿರುವ ಮೀ‌ನುಗಾರ ಸಮುದಾಯಗಳ ಹಿಡಿತವನ್ನು ತಪ್ಪಿಸಿ ಲಕ್ಷಾಂತರ ಕೋಟಿ ವ್ಯವಹಾರದ ಮೀನುಗಾರಿಕೆಯನ್ನು ಕಾರ್ಪೊರೇಟ್ ಕಂಪೆನಿಗಳ ಪಾಲಾಗಿಸುವ ಹುನ್ನಾರ ಹೊಂದಿದೆ.

ಮಂಗಳೂರಿನ ಬೆಂಗರೆ ಪ್ರದೇಶದ ಪಲ್ಗುಣಿ ನದಿ ದಂಡೆಯಲ್ಲಿ, ಕೋಸ್ಟಲ್ ಬರ್ತ್ ಹೆಸರಿನಲ್ಲಿ ಸಾಗರ ಮಾಲಾ ಯೋಜನೆಯ ಕಾಮಗಾರಿ ಗ್ರಾಮಸ್ಥರ ವಿರೋಧದ ನಡುವೆಯೂ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಐದು ಸಾವಿರ ಟನ್ ಸಾಮರ್ಥ್ಯದ ದೇಶೀಯ ಹಡಗುಗಳ ಪ್ರವೇಶದ ಅವಕಾಶ ಹೊಂದಿರುವ ಬರ್ತ್ ಗಾಗಿ ಯೋಜನೆ ಪ್ರದೇಶದಲ್ಲಿ ನದಿಯನ್ನು ಏಳು ಮೀಟರ್ ಆಳಗೊಳಿಸಲಾಗುತ್ತಿದೆ. ಇದರಿಂದಾಗಿ ಇಲ್ಲಿ ನೀರಿನ ಹರಿವಿನ ವೇಗ ಹೆಚ್ಚಳಗೊಂಡು ದೋಣಿಗಳು ನದಿಯಲ್ಲಿ ಬ್ಯಾಲೆನ್ಸ್ ಕಳೆದು ಕೊಳ್ಳುವ, ಇಲ್ಲಿ ಹೇರಳವಾಗಿ ಲಭ್ಯವಾಗುವ ಮರುವಾಯಿ, ಕಪ್ಪೆ ಚಿಪ್ಪು, ಕಾನೆ, ಏಡಿ ಮುಂತಾದ ಜಲಚರಗಳ ಸಂತಾನೋತ್ಪತ್ತಿಯ ಪರಿಸರ ನಾಶಗೊಂಡು ಇವುಗಳ ಲಭ್ಯತೆ ನಷ್ಟಗೊಳ್ಳುವ ಭೀತಿ ಎದುರಾಗಿದೆ. ಮಖ್ಯವಾಗಿ ಬರ್ತ್ ನಿರ್ಮಾಣಕ್ಕಾಗಿ ನಾಡದೋಣಿಗಳು ತಂಗುವ ನದಿ ದಂಡೆಯ ಜಾಗ ಕೋಸ್ಟಲ್ ಬರ್ತ್ ಯೋಜನೆಯ ಪ್ರದೇಶಕ್ಕೆ ಒಳಪಡಿಸಲಾಗಿದ್ದು, ಇಲ್ಲಿ ತಂಗುವ ದೊಡ್ಡ ಸಂಖ್ಯೆಯ ದೋಣಿಗಳು ತಂಗುದಾಣದ ಜೊತೆಗೆ ಮೀನುಗಾರಿಕೆಯ ದುಡಿಮೆಯನ್ನು ಶಾಶ್ವತವಾಗಿ ಕಳೆದು ಕೊಳ್ಳಲಿವೆ.

ಇದೆಲ್ಲವೂ ಪಲ್ಗುಣಿ, ನೇತ್ರಾವತಿ ನದಿಯ ಹಿನ್ನೀರು ಹಾಗೂ ಸಮುದ್ರದಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ಮೀನುಗಾರಿಕೆ ನಡೆಸುವ, ಮರುವಾಯಿ, ಚಿಪ್ಪು, ಏಡಿ ಸಹಿತ ತೀರ ಪ್ರದೇಶದಲ್ಲಿ ಲಭ್ಯವಾಗುವ ಮೀನು ಹಿಡಿಯುವ ಐನೂರಕ್ಕೂ ಹೆಚ್ಚಿನ ನಾಡದೋಣಿಗಳಲ್ಲಿ ಮೀನುಗಾರಿಕೆ ನಡೆಸುವ ಮೀನುಗಾರರ ಭವಿಷ್ಯವನ್ನು ಅತಂತ್ರಗೊಳಿಸಿದೆ. ಆ ಹಿನ್ನಲೆಯಲ್ಲಿ ಸಾಂಪ್ರದಾಯಿಕ ಮೀನುಗಾರರ ದೋಣಿ ತಂಗುವ ನದಿ ದಂಡೆಯನ್ನು ಹಾಗೂ ಅವರ ವಸತಿಗಳನ್ನು ಆಕ್ರಮಿಸಬಾರದು, ಪರಿಸರ ರಕ್ಷಣೆಯಲ್ಲಿ ಪ್ರಧಾನ ಪಾತ್ರ ವಹಿಸುವ ಸಾಂಪ್ರದಾಯಿಕ ಮೀನುಗಾರಿಕೆಗೆ ಅಪಾಯ ಒಡ್ಡುವ, ಮೀನು, ಮರುವಾಯಿ, ಏಡಿ, ಚಿಪ್ಪುಗಳ ಸಂತತಿ ಉತ್ಪತ್ತಿ ತಾಣಗಳನ್ನು ನಾಶಗೊಳಿಸುವ ಸಾಗರ ಮಾಲಾ ಕೋಸ್ಟಲ್ ಬರ್ತ್ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಸಾಂಪ್ರದಾಯಿಕ ಮೀನುಗಾರರ ಕುಟುಂಬಗಳು ತಮ್ಮ ದೋಣಿಯ ಜೊತೆಗೆ ಹಾಗೂ ತಮ್ಮ ಮನೆಗಳಲ್ಲಿ ಪ್ರತಿಭಟನೆ ನಡೆಸುವ ಹೋರಾಟವನ್ನು “ಪಲ್ಗುಣಿ ನಾಡದೋಣಿ ಮೀನುಗಾರರ ಸಂಘ, ಮಂಗಳೂರು” ನೇತೃತ್ವದಲ್ಲಿ ಜುಲೈ 9 ರಂದು ಬೆಂಗರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಗೌರವಾಧ್ಯಕ್ಷ ಮುನೀರ್ ಕಾಟಿಪಳ್ಳ, ಅಧ್ಯಕ್ಷ ಅಬ್ದುಲ್ ತಯ್ಯೂಬ್ ಬೆಂಗರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Related Posts

Leave a Reply

Your email address will not be published.