“ಯಾರಿಗೂ ಹೇಳ್ಬೇಡಿ” – ತನಿಖೆಗೆ ಸಚಿವರನ್ನ ಒತ್ತಾಯ: ಶಾಸಕ ವೇದವ್ಯಾಸ್ ಕಾಮತ್ ಹೇಳಿಕೆ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಘನತೆಗೆ ಕುತ್ತು ತರಲು ರಾಜಕೀಯ ಪ್ರೇರಿತ ಹಿತಾಸಕ್ತಿಗಳು ರಾಜ್ಯಾಧ್ಯಕ್ಷರ ಧ್ವನಿ ಅನುಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ತನಿಖೆಗೆ ಗೃಹ ಸಚಿವರನ್ನು ಒತ್ತಾಯಿಸುತ್ತೇನೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.
ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ವಿಚಾರಗಳ ಚರ್ಚೆಯಾದರೂ ಅದನ್ನು ಶಾಸಕರ ಬಳಿ ಮಾತನಾಡದೆ ಪಕ್ಷದ ಶಿಸ್ತಿಗೆ ಬದ್ಧವಾಗಿರುವ ನಮ್ಮ ರಾಜ್ಯಾಧ್ಯಕ್ಷರು ಸಾರ್ವಜನಿಕರಲ್ಲಿ ಈ ವಿಚಾರ ಚರ್ಚಿಸಲು ಸಾಧ್ಯವೇ ಇಲ್ಲ. ನಳಿನ್ ಕುಮಾರ್ ಕಟೀಲ್ ಅವರ ಹಾಗೂ ಬಿಜೆಪಿಯ ಹೆಸರಿಗೆ ಮಸಿ ಬಳಿಯಲು ಇಂತಹ ಕೃತ್ಯಗಳನ್ನು ಮಾಡಿರುವುದು ರಾಜಕೀಯದ ದುರುದ್ಧೇಶದಿಂದ ಕೂಡಿದೆ. ಈ ಕೃತ್ಯವನ್ನು ಕಟುವಾಗಿ ಖಂಡಿಸುತ್ತೇನೆ.
ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕರ್ನಾಟಕದಲ್ಲಿ ಬಿಜೆಪಿ ಬಲಗೊಳ್ಳುತ್ತಿರುವುದನ್ನು ಕಂಡು ಸಹಿಸದೆ ರಾಜ್ಯಾಧ್ಯಕ್ಷರ ತೇಜೋವಧೆ ಮಾಡಲು ಪ್ರಯತ್ನಿಸುತಿದ್ದಾರೆ. ಬಿಜೆಪಿಯ ಬೆಳವಣಿಗೆಯನ್ನು ಸಹಿಸದ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ವೈರಲ್ ಆಗಿರುವ ಆಡಿಯೋ ಕುರಿತು ಸೂಕ್ತ ತನಿಖೆಯಾಗಬೇಕು. ಹಾಗೂ ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಬೇಕೆಂದು ಗೃಹ ಸಚಿವರಿಗೆ ಒತ್ತಾಯಿಸುತ್ತೇನೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.