ಪುತ್ತೂರಿನಲ್ಲಿ ಪೌರ ಕಾರ್ಮಿಕ ದಿನಾಚರಣೆ
ಪುತ್ತೂರು: ಪೌರ ಕಾರ್ಮಿಕರ ಜೊತೆಗೆ ನಾಗರಿಕರು ಸಹಕರಿಸಿದಾಗ ಮಾತ್ರ ಸ್ವಚ್ಚ ನಗರ ನಿರ್ಮಾಣ ಸಾಧ್ಯವಿದ್ದು, ನಮ್ಮ ಕಸವನ್ನು ನಾವೇ ನಿರ್ವಹಿಸುವಂತಹ ಮನೋಭಾವ ಪ್ರತಿಯೊಬ್ಬರಲ್ಲಿಯೂ ಬೆಳೆಯಬೇಕು ಎಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ ತಿಳಿಸಿದರು.
ಅವರು ಪುತ್ತೂರಿನ ಪುರಭವನದಲ್ಲಿ ಗುರುವಾರ ನಡೆದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನಾಗರಿಕ ಜವಾಬ್ದಾರಿ ಹೆಚ್ಚಾಗಿದ್ದು, ತಮ್ಮ ಕಸಗಳನ್ನು ತಾವೇ ವಿಲೇವಾರಿ ಮಾಡುವುದರೊಂದಿಗೆ ರಸ್ತೆಗಳಲ್ಲಿ ಕಸ ಎಸೆಯುವುದನ್ನು ನಿಲ್ಲಿಸಬೇಕು ಎಂದರು.
ನಾವಿಂದ ಸ್ವಚ್ಚವಾಗಿ ಉಸಿರಾಡುವುದಕ್ಕೆ ಪೌರಕಾರ್ಮಿಕರೇ ಕಾರಣವಾಗಿದ್ದಾರೆ. ಪೌರ ಕಾರ್ಮಿಕರು ಮುಂಜಾನೆ ಎದ್ದು ಮೇಣದ ಬತ್ತಿಯಂತೆ ತಮ್ಮನ್ನು ಉರಿಸಿಕೊಂಡು ಊರಿನ ಸ್ವಚ್ಚತೆಯನ್ನು ಕಾಪಾಡುತ್ತಿದ್ದಾರೆ ಎಂದ ಅವರು ಕಾರ್ಮಿಕರು ದುಶ್ಚಟ, ದುರಾಭ್ಯಾಸಗಳಿಂದ ದೂರವಿದ್ದು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಉಳಿತಾಯದ ಮನೋಭಾವ ಬೆಳೆಸಿಕೊಳ್ಳಬೇಕು. ಕುಡಿತದ ವಿರುದ್ದ ನಗರಸಭೆಯ ವತಿಯಿಂದ ಜನಜಾಗೃತಿ ಕಾರ್ಯಕ್ರಮಗಳು ನಡೆಯಬೇಕು ಎಂದರು.ಹಸಿ ಕಸ ವಿಲೇವಾರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರತೀ ಮನೆಗಳಲ್ಲಿ ಬಯೋಗ್ಯಾಸ್ ಅಳವಡಿಕೆಗೆ ನಗರಸಭೆಯಿಂದ ಪ್ರೋತ್ಸಾಹ ನೀಡಬೇಕು. ಇದರಿಂದ ಪರಿಸರ ಸ್ವಚ್ಚತೆ ಜೊತೆಗೆ ಪುತ್ತೂರು ನಗರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಸಹಕಾರವಾಗಲಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷ ಕೆ. ಜೀವಂಧರ್ ಜೈನ್ ಮಾತನಾಡಿ ಪೌರ ಕಾರ್ಮಿಕರು ಸ್ವಚ್ಚತೆ ವಿಚಾರದಲ್ಲಿ ನಗರಸಭೆಯ ಬೆನ್ನೆಲುಬಾಗಿದ್ದಾರೆ. ಅವರ ಮುತುವರ್ಜಿಯಿಂದ ಸ್ವಚ್ಚವಾದ ನಗರವನ್ನು ನಾವು ಕಾಣಲು ಸಾಧ್ಯವಾಗಿದೆ. ಪೌರ ಕಾರ್ಮಿಕರಿಗೆ ಹೆಚ್ಚುವರಿ ಗೌರವ ಧನ ನೀಡುವ ಬಗ್ಗೆ ಈಗಾಗಲೇ ಸರ್ಕಾರ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಪೌರ ಕಾರ್ಮಿಕರಿಗೆ ವಸತಿ ನೀಡುವ ಬಗ್ಗೆ ಈಗಾಗಲೇ ಬಲ್ನಾಡಿನಲ್ಲಿ ಜಾಗ ಗುರುತಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ವಿಶೇಷ ಗೌರವ ಧನದ ಚೆಕ್ಕನ್ನು ಅಧ್ಯಕ್ಷ ಕೆ. ಜೀವಂಧರ್ ಜೈನ್ ವಿತರಿಸಿದರು.
ಸಭಾಕಾರ್ಯಕ್ರಮದ ಬಳಿಕ ಸಂಸ್ಕೃತಿಕ ಕಾರ್ಯಕ್ರಮ ಮತ್ತು ಆಟೋಟ ಸ್ಪರ್ಧೆ ನಡೆಯಿತು.
ವೇದಿಕೆಯಲ್ಲಿ ನಗರಸಭಾ ಪೌರಾಯುಕ್ತ ಮಧು ಎಸ್ ಮನೋಹರ್, ಪುಡಾ ಅಧ್ಯಕ್ಷ ಬಾಮಿ ಅಶೋಕ್ ಶನೊಯ್,ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಿ ಬನ್ನೂರು, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಅಣ್ಣಪ್ಪ ಕಾರೆಕ್ಕಾಡು ಉಪಸ್ಥಿತರಿದ್ದರು.