ಬಿಎಸ್ ಎನ್ ಎಲ್ ಬಗ್ಗೆ ಜನತೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳಿ : ಪುತ್ತೂರು ಶಾಸಕ ಸಂಜೀವ ಮಠಂದೂರು
ಪುತ್ತೂರು: ನಮ್ಮಲ್ಲಿಗೆ ಹಲವು ಸಂಸ್ಥೆಗಳ ಮೊಬೈಲ್ ನೆಟ್‌ವರ್ಕ್ಗಳು ಬಂದಿದ್ದರೂ ಅಷ್ಟೇ ವೇಗವಾಗಿ ಮಾಯವಾಗಿ ಹೋಗಿದೆ. ಇವೆಲ್ಲದರ ನಡುವೆ ಬಿಎಸ್‌ಎನ್‌ಎಲ್ ಸಂಸ್ಥೆಯ ಬಗ್ಗೆ ಜನರು ವಿಶ್ವಾಸವಿಟ್ಟು ಅದನ್ನು ಬಳಕೆ ಮಾಡುತ್ತಿದ್ದಾರೆ. ಜನರು ಬಿಎಸ್‌ಎನ್‌ಎಲ್ ಸಂಸ್ಥೆಯ ಬಗ್ಗೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದರು. ಅವರು ಪುತ್ತೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಸರ್ಕಾರಿ ಮತ್ತು ಖಾಸಗಿ ದೂರವಾಣಿ ನೆಟ್‌ವರ್ಕ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಂಸ್ಥೆಗಳ ಅಧಿಕಾರಿಗಳ ಸಭೆ ನಡೆಸಿದರು.
ವಿವಿಧೆಡೆ ನೆಟ್ವರ್ಕ್ ಸಮಸ್ಯೆ ಉದ್ಭವಿಸಿರುವ ಬಗ್ಗೆ ಪ್ರಸ್ತಾವಿಸಿದ ಶಾಸಕರು, ರೇಷನ್ ವ್ಯವಸ್ಥೆಯಿಂದ ಹಿಡಿದು ಲಸಿಕೆ ಪಡೆಯುವ ತನಕವು ನೆಟ್ವರ್ಕ್ನ ಅಗತ್ಯತೆ ಇದೆ. ಪ್ರಧಾನ ಮಂತ್ರಿ ಅವರು ಸಂಪೂರ್ಣ ಡಿಜಿಟಲೈಶನ್‌ಗೆ ಕರೆ ನೀಡಿದ್ದು ಹೀಗಾಗಿ ನೆಟ್ವರ್ಕ್ ಸಮರ್ಪಕವಾಗಿದ್ದರೆ ಮಾತ್ರ ಅದರ ಅನುಷ್ಠಾನ ಸಾಧ್ಯವಾಗುತ್ತದೆ ಎಂದರು.
ಬಿಎಸ್‌ಎನ್‌ಎಲ್ ಅಧಿಕಾರಿ ಮಾಹಿತಿ ನೀಡಿ ಅವಿಭಜಿತ ತಾಲೂಕಿನಲ್ಲಿ ೩೮ ಬಿಎಸ್‌ಎನ್‌ಎಲ್ ಟವರ್‌ಗಳಿದೆ. ಈ ಪೈಕಿ ೩೫ ರಲ್ಲಿ ೨ ಜಿ ನೆಟ್ವರ್ಕ್ ಸಂಪರ್ಕ ಸಿಗುತ್ತಿದೆ. ಟವರ್‌ಗಳ ನಿರ್ವಹಣೆಗೆ ಅಳವಡಿಸಿರುವ ಬ್ಯಾಟರಿಯ ಅವಧಿ ಮುಕ್ತಾಯಗೊಂಡಿರುವ ಕಾರಣ ಕೆಲವು ಕಡೆಗಳಲ್ಲಿ ಕಾರ್ಯ ನಿರ್ವಹಣೆಗೆ ಅಡ್ಡಿ ಉಂಟಾಗಿದೆ. ಹೊಸ ಬ್ಯಾಟರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ರಾಜ್ಯ ಮಟ್ಟದಲ್ಲಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಆರು ತಿಂಗಳಲ್ಲಿ ಬಿಎಸ್‌ಎನ್‌ಎಲ್ ಅನ್ನು ನಂಬರ್ ವನ್ ಆಗಿ ರೂಪಿಸುವ ಗುರಿ. ಇದಕ್ಕೆ ಎಲ್ಲರ ಪೂರ್ಣ ಸಹಕಾರ ಬೇಕಾಗಿದೆ ಎಂದರು.
ಸಭೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಪಿ.ಕಾರ್ಯಪ್ಪ, ತಹಶೀಲ್ದಾರ್ ರಮೇಶ್ ಬಾಬು, ತಾಲೂಕು ಪಂಚಾತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಪೌರಯುಕ್ತ ಮಧು ಎಂ.ಎಸ್.ಉಪಸ್ಥಿತರಿದ್ದರು.