ಬುಲೆಟ್ ಗ್ಯಾಸ್ ಟ್ಯಾಂಕರ್ ನಿಲುಗಡೆಗೆ ಸ್ಥಳೀಯರ ವಿರೋಧ
ಸುರತ್ಕಲ್ ಬಾಳ ಗ್ರಾಮದ ಎಂಆರ್ಪಿಎಲ್ ರಸ್ತೆಯಲ್ಲಿ ಸರ್ವೇ ನಂಬರ್ 185ರಲ್ಲಿ ಟ್ಯಾಂಕರ್ ಯಾರ್ಡ್ ನಿರ್ಮಾಣ ಮಾಡಲು ಕಂಪೆನಿ ಮುಂದಾಗಿದೆ. ಇದರಿಂದ ಪರಿಸರದ ನಿವಾಸಿಗಳಿಗೆ ತೊಂದರೆಯಾಗಲಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ ನೂರಾರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳೀಯರ ಮನವಿಗೆ ಈಗಾಗಲೇ ಶಾಸಕ ಉಮಾನಾಥ್ ಕೋಟ್ಯಾನ್ ಸ್ಪಂದಿಸಿದ್ದು ಸಮಸ್ಯೆ ಬಗೆಹರಿಯದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.
ಕುಂಬ್ಳಕೆರೆ, ಒಟ್ಟೆಕಾಯರ್ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲಿ 200ರಷ್ಟು ಕುಟುಂಬಗಳು ವಾಸ ಮಾಡುತ್ತಿವೆ. ರಸ್ತೆಯ ಅಗಲ ಕಿರಿದಾಗಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇಲ್ಲಿ ಬುಲೆಟ್ ಗ್ಯಾಸ್ ಟ್ಯಾಂಕರ್ ನಿಲುಗಡೆಗೆ ಯಾರ್ಡ್ ನಿರ್ಮಾಣ ಮಾಡಿದಲ್ಲಿ ಜನಜೀವನಕ್ಕೆ ಮಾರಕವಾಗಲಿದೆ. ಗ್ಯಾಸ್ ಲೀಕೇಜ್ ಉಂಟಾದರೆ ಪ್ರಾಣಾಪಾಯ ಉಂಟಾಗಲಿದೆ. ಆದ್ದರಿಂದ ಇಲ್ಲಿ ಟ್ಯಾಂಕರ್ ಯಾರ್ಡ್ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಈಗಾಗಲೇ ಬಾಳ ಗ್ರಾಮ ಪಂಚಾಯತ್ ಗೆ ಮನವಿ ನೀಡಲಾಗಿತ್ತು. ಪಂಚಾಯತ್ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ ತೆರೆಮರೆಯಲ್ಲಿ ಟ್ಯಾಂಕರ್ ಯಾರ್ಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ ರೇಖಾ ಅವರು ಆರೋಪಿಸಿದ್ದಾರೆ.
ಗ್ರಾಮ ಪಂಚಾಯತ್, ಜಿಲ್ಲಾಧಿಕಾರಿಗಳು ಜನರ ಸಮಸ್ಯೆ ಅರಿತುಕೊಂಡರೆ ಒಳ್ಳೆಯದು ಎಂದು ಸ್ಥಳೀಯರಾದ ಲಿಖಿತ ಬಾಳ ಒತ್ತಾಯ ಮಾಡುತ್ತಿದ್ದಾರೆ. ಟ್ಯಾಂಕರ್ ಯಾರ್ಡ್ ನಿರ್ಮಾಣಕ್ಕೆ ಈಗಾಗಲೇ ನಮ್ಮ ಪ್ರದೇಶವನ್ನು ನಿಗದಿಪಡಿಸಲಾಗಿದೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು ಜನಪ್ರತಿನಿಧಿಗಳು ತಕ್ಷಣವೇ ಸ್ಪಂದಿಸಿ ಸಮಸ್ಯೆ ಬಗೆಹರಿಸಬೇಕು. ಇಲ್ಲಿ ಯಾವುದೇ ಕಾರಣಕ್ಕೆ ಜನರಿಗೆ ಬೇಡವಾದ ಯಾರ್ಡ್ ನಿರ್ಮಾಣ ಮಾಡಲು ಅವಕಾಶ ಕೊಡುವುದಿಲ್ಲ.
ಬಾಳ ಒಟ್ಟೆಕಾಯರ್ ಪರಿಸರದಲ್ಲಿ ಈಗಾಗಲೇ ಟ್ಯಾಂಕರ್ ಚಾಲಕ, ಕ್ಲೀನರ್ ಗಳಿಂದ ಹೆಣ್ಣುಮಕ್ಕಳಿಗೆ ಕಿರುಕುಳವಾಗುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಇಲ್ಲಿ ಸ್ಥಳೀಯ ಬಾಲಕಿಗೆ ಕಿರುಕುಳ ನೀಡಲು ಮುಂದಾಗಿದ್ದು ಈ ವೇಳೆ ಬಾಲಕಿ ಪಾರಾಗಿದ್ದಾಳೆ. ಈ ಬಗ್ಗೆ ಸ್ಥಳೀಯರು ಸುರತ್ಕಲ್ ಠಾಣೆಗೆ ಲಿಖಿತ ದೂರನ್ನು ನೀಡಿದ್ದು ರಕ್ಷಣೆ ನೀಡುವಂತೆ ಒತ್ತಾಯಿಸಿದ್ದಾರೆ.
ಟ್ಯಾಂಕರ್ ಯಾರ್ಡ್ ನಿರ್ಮಾಣದಿಂದ ಇಂತದ್ದೇ ಸಮಸ್ಯೆ ಹೆಚ್ಚಾಗಲಿದ್ದು ಗ್ರಾಮದ ಹೆಣ್ಣುಮಕ್ಕಳಿಗೆ ರಕ್ಷಣೆ ನೀಡುವಂತೆ ಮನವಿಯಲ್ಲಿ ಅಗ್ರಹಿಸಿದ್ದಾರೆ.
ಒಟ್ಟಿನಲ್ಲಿ ಸುರತ್ಕಲ್ ಬಾಳ ಗ್ರಾಮದ ಎಂಆರ್ಪಿಎಲ್ ರಸ್ತೆಯಲ್ಲಿ ಟ್ಯಾಂಕರ್ ಸಮಸ್ಯೆಯನ್ನ ಅದಷ್ಟು ಬೇಗ ಪರಿಹಾರ ಕಾಣಲಿ ಎಂಬುವುದೇ ನಮ್ಮ ಹಾರೈಕೆ…