ಮಂಗಳಮುಖಿಯರಿಗೆ ಹಲ್ಲೆ ನಡೆಸಿದ್ದ ಪ್ರಕರಣ: ನವಸಹಜ ಅಧ್ಯಕ್ಷ ನಿಖಿಲ್ ಬಂಧನ
ಮಂಗಳೂರು: ಮಂಗಳಮುಖಿಯರಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ನವಸಹಜ ಸಂಘಟನೆಯ ಅಧ್ಯಕ್ಷ ನಿಖಿಲ್ ಎಂಬಾತನನ್ನು ಪಣಂಬೂರು ಪೊಲೀಸರು ಉಡುಪಿಯಲ್ಲಿ ಬಂಧಿಸಿದ್ದಾರೆ. ಸಂಘಟನೆಯ ಇತರ ಆರೋಪಿಗಳು ತಪ್ಪಿಸಿಕೊಂಡಿದ್ದು ಪೊಲೀಸರು ಅವರ ಹುಡುಕಾಟ ನಡೆಸುತ್ತಿದ್ದಾರೆ.
ಜುಲೈ 26ರಂದು ರಾತ್ರಿ ನಿಖಿಲ್ ತನ್ನ ಇತರ ಸಂಗಡಿಗರಾದ ಅರುಂಧತಿ, ರಾಶಿ, ರೇಖಾ, ಪ್ರೀಯಾ ಮತ್ತಿತರು ಸೇರಿ ಶಾಂತಾ ಪೂರ್ಣಿಮಾ, ನೀಲಾ, ಹುಲಿಗೆಮ್ಮ ಮತ್ತು ಪಾರ್ವತಿ ಎಂಬವರ ಮೇಲೆ ಬೈಕಂಪಾಡಿ ರೈಲ್ವೆ ಗೇಟ್ ಬಳಿ ಭಿಕ್ಷಾಟನೆ ಮಾಡುತ್ತಿದ್ದ ವೇಳೆ ಹಲ್ಲೆ ನಡೆಸಿದ್ದರು. ಈ ವೇಳೆ ಇಲ್ಲಿ ಬೇರೆ ಜಿಲ್ಲೆಯಿಂದ ಬಂದು ಭಿಕ್ಷಾಟನೆ ಮಾಡಬಾರದು ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು. ಆರೋಪಿಗಳು ಮೆಣಸಿನ ಪುಡಿ ಎರಚಿ, ಬಾಟಲಿಗಳು ಮತ್ತು ಇತರ ಹರಿತ ಆಯುಧಗಳಿಂದ ಹಲ್ಲೆ ನಡೆಸಿದ್ದರು.ಹಲ್ಲೆಗೊಳಗಾದ ಮಂಗಳಮುಖಿಯರಲ್ಲಿ ನೀಲಾ ಎಂಬಾಕೆಗೆ ಗ್ಲಾಸಿನಿಂದ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಸುಮಾರು 3 ಗಂಟೆ ಪ್ರಜ್ಞಾ ಹೀನರಾಗಿದ್ದರು. ಎಲ್ಲಾ ಹಲ್ಲೆಗೊಳಗಾದ ಮಂಗಳ ಮುಖಿಯರಿಗೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.