ಮಂಗಳೂರಿನಲ್ಲಿ ಹೆಂಡತಿ ಮತ್ತು ಮಗನಿಗೆ ಅಪ್ಪನಿಂದ ಚೂರಿ ಇರಿತ..!
ಮಂಗಳೂರು ನಗರದ ಕಂಕನಾಡಿಯ ಸೇರಾವೋ ರಸ್ತೆ ಕಂಪೌಂಡ್ನಲ್ಲಿ ಪತಿಯೇ ಪತ್ನಿ ಮತ್ತು ಪುತ್ರನಿಗೆ ಚೂರಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಮಂಗಳೂರು ನಗರದ ಕಂಕನಾಡಿ ಸೇರಾವೋ ರಸ್ತೆ ಕಂಪೌಂಡ್ ನಿವಾಸಿ ರಮೇಶ್ ಬಂಗೇರಾ (54) ಎಂಬುವವರು ಪ್ರಕರಣದ ಆರೋಪಿ. ಬೇಬಿ ಕುಂದರ್ ಮತ್ತು ಅಶ್ವಿನ್ ಹಲ್ಲೆಗೊಳಗಾಗಿದ್ದಾರೆ.
ಬೇಬಿ ಕುಂದರ್ ಅವರು ತನ್ನ ಗಂಡ ರಮೇಶ್ ಬಂಗೇರಾ ಮತ್ತು ಮಗ ಅಶ್ವಿನ್ ಜತೆಯಲ್ಲಿ ವಾಸವಾಗಿದ್ದರು. ಸೆ.11ರಂದು ರಾತ್ರಿ 10:30ಕ್ಕೆ ಗಂಡ ರಮೇಶ್ ಬಂಗೇರಾ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಈ ಜಾಗ ನನ್ನದ್ದು, ನೀವಿಬ್ಬರೂ ಇಲ್ಲಿಂದ ಹೋಗಿ ಎಂದು ಹೇಳಿ ಚೂರಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ. ಈ ಸಂದರ್ಭ ಬೇಬಿ ಕುಂದರ್ ಅವರ ಎಡಕೈ ಮಣಿಗಂಟಿಗೆ ಗಾಯವಾಗಿದೆ. ಇದನ್ನು ನೋಡಿ ಮಗ ಅಶ್ವಿನ್ ತಡೆಯಲು ಬಂದಾಗ ಅಶ್ವಿನ್ನ ಬಲ ಕೈಗೂ ತಿವಿದಿದ್ದು, ಗಾಯವಾಗಿದೆ. ಬೊಬ್ಬೆ ಕೇಳಿದ ನೆರೆಕರೆಯವರು ಸ್ಥಳಕ್ಕೆ ಧಾವಿಸಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ಈ ಘಟನೆಯ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.