ಯುಪಿಸಿಎಲ್ ಅವಾಂತರ: ಹತ್ತಾರು ಎಕ್ರೆ ಕೃಷಿ ಭೂಮಿ ಮುಳುಗಡೆ
ತೆಂಕ ಎರ್ಮಾಳು ತೊಟ್ಟಂ ಪ್ರದೇಶದ ಕೃಷಿ ಚಟುವಟಿಕೆ ನಡೆಸಿದ ಹತ್ತಾರು ಎಕ್ರೆ ಕೃಷಿ ಭೂಮಿ ಯುಪಿಸಿಎಲ್ ಕಂಪನಿಯ ನಿರ್ಲಕ್ಷ್ಯದಿಂದ ಮುಳುಗಡೆಗೊಂಡಿದ್ದು, ರೈತರು ಕಂಗಾಲಾಗಿದ್ದಾರೆ.
ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಜನ ವಿರೋಧದ ನಡುವೆಯೂ ಅಸ್ಥಿತ್ವಕ್ಕೆ ಬಂದ ಈ ಕಂಪನಿಯ ಪೈಪ್ಲೈನ್ ತೆಂಕ ಎರ್ಮಾಳಿನ ತೊಟ್ಟಂ ಬಳಿ ಸಮುದ್ರಕ್ಕೆ ಸಂಪರ್ಕ ಹೊಂದಿದ ಬಳಿಕ, ಆ ಭಾಗದ ಕೃಷಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಪ್ರದೇಶದ ಮಳೆ ನೀರು ಸಮುದ್ರ ಸೇರಲು ಈ ಪೈಪ್ ಲೈನ್ ಕಾಮಗಾರಿಯಿಂದ ತೊಡಕಾಗಿದೆ. ಈ ಬಗ್ಗೆ ಆರಂಭದ ದಿನದಲ್ಲಿ ಕಂಪನಿಯ ಗಮನಕ್ಕೆ ತಂದಾಗ ಸ್ಪಂದಿ ಸುತ್ತಿದ್ದ ಕಂಪನಿ, ನೀರು ಸರಾಗವಾಗಿ ಹರಿದು ಹೋಗಲು ಪೂರಕ ವ್ಯವಸ್ಥೆ ಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ರೈತರ ಕೂಗಿಗೆ ಮನ್ನಣೆ ನೀಡದೆ ಕೃಷಿಕರ ಹೊಟ್ಟೆಗೆ ಹೊಡೆತ ನೀಡಿದೆ.
ಈ ಬಗ್ಗೆ ಸ್ಥಳೀಯ ಗ್ರಾ.ಪಂ. ಅಧ್ಯಕ್ಷರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂಬುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಕಳೆದ ಐದು ದಿನಗಳಿಂದ ನೀರು ಕೃಷಿ ಭೂಮಿಯಲ್ಲಿ ನಿಂತಿದ್ದರಿಂದ ಸಹಸ್ರಾರು ರೂಪಾಯಿ ಖರ್ಚು ಮಾಡಿ ನಡೆಸಿದ ಕೃಷಿ ಚಟುವಟಿಕೆ ನಾಶವಾಗಿ ಹೋಗುವಂತ್ತಾಗಿದೆ ಎಂಬುದಾಗಿ ಬೇಸರ ವ್ಯಕ್ತ ಪಡಿಸಿದ್ದಾರೆ.
ಗ್ರಾ.ಪಂ. ಸದಸ್ಯ ಕಿಶೋರ್ ಮಾತನಾಡಿ ಕಂಪನಿಯ ನಿರ್ಲಕ್ಷ್ಯದಿಂದ ಇಲ್ಲಿ ಸಮಸ್ಯೆ ಉದ್ಭವಗೊಂಡಿದೆ. ಕೃಷಿ ಚಟುವಟಿಕೆಯೇ ವಿರಳವಾಗುತ್ತಿರುವ ಈ ಕಾಲಘಟ್ಟದಲ್ಲಿ ಮಾಡಿದ ಕೃಷಿಯೂ ಈ ರೀತಿ ಯಾರ ನಿರ್ಲಕ್ಷ್ಯಕ್ಕೆ ಬಲಿಯಾದರೆ ಕೃಷಿ ಚಟುವಟಿಕೆ ಮಾಡಲು ಯಾರು ಮುಂದೆ ಬರುತ್ತಾರೆ..? ಇವರಿಗಾದ ನಷ್ಟವನ್ನು ಭರಿಸುವವರ್ಯಾರು..? ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ವರದಿ: ಸುರೇಶ್ ಎರ್ಮಾಳ್