ವಿಟ್ಲ ವ್ಯಾಪ್ತಿಯಲ್ಲಿ ಹಾದುಹೋಗಲಿರುವ 400ಕೆವಿ ವಿದ್ಯುತ್: ಕೃಷಿಕರಿಗೆ ತೊಂದರೆ

ವಿಟ್ಲ: ಉಡುಪಿ ಕಾಸರಗೋಡು 400ಕೆವಿ ವಿದ್ಯುತ್ ಮಾರ್ಗ ಸದ್ಯದ ಮಾಹಿತಿಯಂತೆ ವಿಟ್ಲ ಪಟ್ಟಣ ಪಂಚಾಯಿತಿಯ 4-5 ವಾರ್ಡ್ ಗಳಲ್ಲಿ ಹಾದುಹೋಗುತ್ತಿದೆ. ಕೃಷಿಕರಿಗೆ ಹಾಗೂ ಹಲವಾರು ಜಮೀನು ಮಾಲೀಕರಿಗೆ ಸಮಸ್ಯೆಯಾಗುತ್ತಿದ್ದರೂ, ಈ ಬಗ್ಗೆ ಶಾಸಕರಾಗಲಿ, ಈ ಭಾಗದ ಜನಪ್ರತಿನಿಧಿಗಳಾಗಲೀ ಸಂತ್ರಸ್ತ ಜನರ ಪರವಾಗಿ ಧ್ವನಿ ಎತ್ತುತ್ತಿಲ್ಲ ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಆರೋಪಿಸಿದರು.

ಬಂಟ್ವಾಳ ತಾಲೂಕಿನಲ್ಲಿ ಅಗಾಧ ಪ್ರಮಾಣದಲ್ಲಿ ರೈತರಿಗೆ ತೊಂದರೆಯಾಗುತ್ತಿದೆ. ಈ ಯೋಜನೆಯ ಬಗ್ಗೆ ಜನರು ಈಗಾಗಲೇ ಭಯಭೀತರಾಗಿದ್ದು, ಸರ್ಕಾರ – ಜನಪ್ರತಿನಿಧಿ ಆಡಳಿತ ವ್ಯವಸ್ಥೆ ಧೈರ್ಯ ತುಂಬುವ ಕಾರ್ಯ ಮಾಡುತ್ತಿಲ್ಲ. ಕರ್ನಾಟಕದ ಜನರನ್ನು ಕತ್ತಲಲ್ಲಿಟ್ಟು ಕಾಸರಗೋಡು ಸೇರಿ ಉತ್ತರ ಕೇರಳ ಭಾಗಕ್ಕೆ ವಿದ್ಯುತ್ ಪೂರೈಸುವ ಈ ಯೋಜನೆಯಿಂದ ಕರ್ನಾಟಕಕ್ಕೆ ಲಾಭವೇನು ಎಂದು ವಿಟ್ಲ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಶ್ನಿಸಿದ್ದಾರೆ.

ಯೋಜನೆಗೆ ತಾಂತ್ರಿಕ ಅವಕಾಶಗಳು ಸಾಕಷ್ಟು ಇದ್ದರೂ, ಅದನ್ನು ಬಳಸದೆ ಜನರಿಗೆ ತೊಂದರೆ ತೊಂದರೆ ಕೊಡುವ ಕಾರ್ಯವಾಗುತ್ತಿದೆ. ಒಟ್ಟು ಯೋಜನೆಯ ಒಟ್ಟು ಸ್ವರೂಪವನ್ನು ಜಿಲ್ಲಾಧಿಕಾರಿ – ಜನಪ್ರತಿನಿಧಿಗಳು – ಕಂಪನಿ ಅಧಿಕಾರಿಗಳು ಬಹಿರಂಬ ಪಡಿಸಲು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಜನರಿಗೆ ತೊಂದರೆಯಾಗುವ ಈ ಯೋಜನೆ ಖಡಾಖಂಡಿತವಾಗಿ ಬೇಡ. ಪರಿಹಾರ ಹಾಗೂ ಯೋಜನಾ ವೆಚ್ಚದಲ್ಲಿ ಕೇರಳದಲ್ಲಿ ಹೊಸ ವಿದ್ಯುತ್ ಉತ್ಪಾಧನಾ ಘಟಕವನ್ನು ನಿರ್ಮಿಸಲಿ ಎಂದು ಅವರು ಆಗ್ರಹಿಸಿದ್ದಾರೆ.

ಡಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ನಗರ ಕಾಂಗ್ರೆಸ್ ಅಧ್ಯಕ್ಷ ವಿ. ಕೆ. ಎಂ. ಅಶ್ರಫ್, ದ. ಕ. ಅಲ್ಪ ಸಂಖ್ಯಾತ ಘಟಕದ ಸಂಚಾಲಕ ಅಶೋಕ್ ಡಿಸೋಜ ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.