ಶಾಸಕ ಉಮಾನಾಥ ಕೋಟ್ಯಾನ್ ಬಗ್ಗೆ ಅಪಪ್ರಚಾರ : ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲದಿಂದ ಖಂಡನೆ
ಮೂಡುಬಿದಿರೆ : ಭಾರತೀಯ ಜನತಾ ಪಾರ್ಟಿ ರಾಷ್ಟ್ರಾಭಿಮಾನ ಮತ್ತು ಹಿಂದುತ್ವವನ್ನು ಎತ್ತಿ ಹಿಡುವ ಪಕ್ಷವಾಗಿದೆ. ಶಾಸಕ ಉಮಾನಾಥ ಕೋಟ್ಯಾನ್ ಅವರು ಕೂಡಾ ಇದರ ಕಾರ್ಯಕರ್ತರಿಂದಲೇ ಆಯ್ಕೆಯಾಗಿ ಬಂದು ಅಭಿವೃದ್ಧಿಯ ಜೊತೆಗೆ ಶಾಂತಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುತ್ತಿದ್ದಾರೆ. ಅವರ ಜನಪ್ರಿಯತೆಯನ್ನು ಸಹಿಸದ ರಾಜಕೀಯ ವಿರೋಧಿಗಳು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ-ಸುದ್ದಿ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುತ್ತಿರುವುದನ್ನು ಮೂಲ್ಕಿ-ಮೂಡುಬಿದಿರೆ ಬಿಜೆಪಿ ಮಂಡಲವು ಖಂಡಿಸುತ್ತದೆ ಎಂದು ಮಂಡಲದ ಅಧ್ಯಕ್ಷ ಸುನಿಲ್ ಆಳ್ವ ತಿಳಿಸಿದ್ದಾರೆ.
ಅವರು ಬಿಜೆಪಿ ಕಛೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಅ.9ರಂದು ಹಿಂದೂ ಮಹಿಳೆಯರಿಬ್ಬರು ಅನ್ಯ ಕೋಮಿನವರ ಕಾರಿನಲ್ಲಿ ಪ್ರಯಾನಿಸುತ್ತಿದ್ದಾಗ ಹಿಂದೂ ಸಂಘಟನೆಯ ಕಾರ್ಯಕರ್ತರು ಕೆಸರುಗದ್ದೆಯಲ್ಲಿ ಕಾರನ್ನು ನಿಲ್ಲಿಸಿ ಪ್ರಶ್ನಿಸಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಸುಳ್ಳು ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಈ ಬಗ್ಗೆ ನ್ಯಾಯವಾಧಿಗಳು ನ್ಯಾಯಾಧೀಶರ ಸಮ್ಮುಖದಲ್ಲಿ ಮಧ್ಯಂತರ ಜಾಮೀನನ್ನು ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಬಗ್ಗೆ ಪೊಲೀಸರು ರಾತ್ರಿ 8.20ರ ವೇಳೆಗೆ ನ್ಯಾಯಾಧೀಶರ ಸಮ್ಮುಖದಲ್ಲಿ ಅಪಾದಿತರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರು ಪಡಿಸಿದಾಗ ಮಧ್ಯಂತರ ಜಾಮೀನಿನಲ್ಲಿ ಶರ್ತವನ್ನು ವಿಧಿಸಿ ಬಿಡುಗಡೆಗೊಳಿಸಿರುತ್ತಾರೆ.
ಘಟನೆಯ ಸಂದರ್ಭದಲ್ಲಿ ಪೊಲೀಸರು ನಡೆದುಕೊಂಡ ರೀತಿ ಇದರ ಬಗ್ಗೆ ಸಂಪೂರ್u ಮಾಹಿತಿಯನ್ನು ಅರಿತ ಶಾಸಕ ಉಮಾನಾಥ ಕೋಟ್ಯಾನ್ ಸಮಯೋಚಿತವಾಗಿ, ಕಾನೂನಾತ್ಮಕವಾಗಿ ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಸಂಘಟನೆಯ ಕಾರ್ಯಕರ್ತರ ಭಾವನೆಗೆ ಪೂರಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವ ಮೂಲಕ ಠಾಣೆಗೆ ತೆರಳಿ ಕಾರ್ಯಕರ್ತರಿಗೆ ಸಾಂತ್ವಾನ ಹೇಳಿದ್ದಾರೆ. ಆದರೆ ಇದನ್ನು ಅಭಯಚಂದ್ರ ಜೈನ್ ಅವರು ಸತ್ಯವನ್ನು ಮರೆಮಾಚಿ ಶಾಸಕರು ಪೊಲೀಸರ ಮೇಲೆ ಒತ್ತಡ ಹೇರಿ, ಕಾನೂನಿಗೆ ವಿರುದ್ಧವಾಗಿ ಆರೋಪಿಗಳನ್ನು ಬಿಡುಗಡೆಗೊಳಿಸಿದ್ದಾರೆ ಎಂಬ ಸುಳ್ಳು ಸುದ್ದಿಗಳನ್ನು ನಿರಂತರವಾಗಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಈ ಬಗ್ಗೆ ತಪ್ಪು ಮಾಹಿತಿ ಹಾಗೂ ಅಪಪ್ರಚಾರ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಬದ್ಧರಾಗಿದ್ದೇವೆ ಎಂದು ಸುನಿಲ್ ಆಳ್ವ ಎಚ್ಚರಿಸಿದ್ದಾರೆ.
ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕೆ.ಕೃಷ್ಣರಾಜ ಹೆಗ್ಡೆ, ಮಂಡಲ ಉಪಾಧ್ಯಕ್ಷ ಲಕ್ಷ್ಮಣ್ ಪೂಜಾರಿ, ಪ್ರ.ಕಾರ್ಯದರ್ಶಿಗಳಾದ ಗೋಪಾಲ ಶೆಟ್ಟಿಗಾರ್ ಮತ್ತು ಕೇಶವ ಕರ್ಕೇರಾ, ಮಂಡಲದ ಮಾಜಿ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.