ಸಂಬಳ ಸಿಗದೆ ಪರದಾಡುತ್ತಿರುವ ಕೆ ಎಸ್ ಆರ್ ಟಿ ಸಿ ನೌಕರರು : ಬಿಎಂಎಸ್ ಸಂಘಟನೆಯಿಂದ ಧರಣಿಗೆ ನಿರ್ಧಾರ
ಪುತ್ತೂರು:ಕೆ ಎಸ್ ಆರ್ ಟಿ ಸಿ ಮಜ್ದೂರ್ ಸಂಘದ ಪುತ್ತೂರು ವಿಭಾಗವು 2004ರಿಂದ ಸಾರಿಗೆ ಸಂಸ್ಥೆಯ ಉಳಿಯುವಿಗಾಗಿ ಹಲವಾರು ಕಾನೂನಾತ್ಮಕ ಹೋರಾಟಗಳನ್ನು ಮಾಡಿಕೊಂಡು ಬಂದಿದೆ. ಸಂಸ್ಥೆಯ ವಿರುದ್ದ ಯಾವುದೇ ಮುಷ್ಕರವನ್ನು ಸಂಘವು ಮಾಡಿಲ್ಲ. ಕಾನೂನು ಸಮ್ಮತ ವಿಚಾರದಲ್ಲಿ ಕಾರ್ಮಿಕರಿಗೆ ಈಗ ಆಗಿರುವ ಅನ್ಯಾಯವನ್ನು ವಿರೋಧಿಸಿ ಅ. 21ರಿಂದ ಕೆಎಸ್‍ಆರ್‍ಟಿಸಿ ಪುತ್ತೂರು ವಿಭಾಗ ಕಚೇರಿಯ ಮುಂದೆ ಸಂಘದ ಸದಸ್ಯರು ಕಪ್ಪುಪಟ್ಟಿ ಧರಿಸಿ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಆರಂಭಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಹಾಗೂ ನ್ಯಾಯವಾದಿ ಶ್ರೀಗಿರೀಶ್ ಮಳಿ ಹೇಳಿದರು.
ಅವರು ಪುತ್ತೂರು ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆಯ ಅಧಿಕಾರಿಗಳಿಂದ ತೊಡಗಿ ಸಾಮಾನ್ಯ ಕಾರ್ಮಿಕರವರೆಗೆ ಅಗಸ್ಟ್ ತಿಂಗಳ ಅರ್ಧ ವೇತನ ಪಾವತಿಯಾಗಿದೆ. ಸೆಪ್ಟೆಂಬರ್ ತಿಂಗಳ ವೇತನ ಪಾವತಿಯಾಗಿಲ್ಲ. ನಿವೃತ್ತ ನೌಕರರ ಗ್ರಾಜ್ಯುವಿಟಿ ಪಾವತಿಯಾಗಿಲ್ಲ, ಭವಿಷ್ಯ ನಿಧಿ ಪಾವತಿಯಾಗಿಲ್ಲ ಈ ವಿಚಾರವಾಗಿ ಸಂಘವು ಈಗಾಗಲೇ ಜಿಲ್ಲಾ ಉಸ್ತುವಾರಿಸಚಿವರಿಗೆ ಹಾಗೂ ಪುತ್ತೂರು ಶಾಸಕರಿಗೆ ಮನವಿ ಮಾಡಿದೆ ಎಂದರು. ನೌಕರರ ವೇತನ ಪಾವತಿ ವಿಳಂಬ ಸಹಿತ ಎಲ್ಲಾ ಸಮಸ್ಯೆಗಳಿಗೂ ಕೆಎಸ್‍ಆರ್‍ಟಿಸಿಯ ಕೇಂದ್ರ ಕಚೇರಿಯ ಉನ್ನತ ಅಧಿಕಾರಿಗಳು ಕಾರಣರಾಗಿದ್ದಾರೆ ಎಂದು ಆರೋಪಿಸಿದ ಶ್ರೀಗಿರೀಶ್ ಮಳಿ ಸ್ವಯಂ ನಿವೃತ್ತಿಪಡೆದ ನೌಕರರ ನಿವೃತ್ತಿ ನಂತರದ ಯಾವುದೇ ಪರಿಹಾರವನ್ನು ಇಲ್ಲಿಯವರೆಗೆ ಪಾವತಿಸಲಿಲ್ಲ. ಕಾರ್ಮಿಕರ ಬದುಕಿನೊಂದಿಗೆ ಕೇಂದ್ರ ಕಚೇರಿಯ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು
ಆರೋಪಿಸಿದರು.
ಅ. 21ರಿಂದ ನಡೆಯುವ ಅನಿರ್ಧಿಷ್ಟಾವಧಿ ಮೌನ ಪ್ರತಿಭಟನೆಗೆ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡದಿದ್ದಲ್ಲಿ ಅ. 25ರಿಂದ ಕೆಎಸ್‍ಆರ್‍ಟಿಸಿ ಮಜ್ದೂರ್ ಸಂಘದ ಸದಸ್ಯರು ಅಮರಣಂತ ಉಪವಾಸವನ್ನು ಕೈಗೊಳ್ಳುವ ನಿರ್ಧಾರಕ್ಕೆ ಬರುವುದು ಅನಿವಾರ್ಯವಾಗಿದೆ.ಈಗಾಗಲೇ ಈ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ. ಈ ವಿಚಾರವಾಗಿ ಅವರು ಸರಕಾರದ ಮೇಲೆ ಒತ್ತಡ ಹಾಕುವ ಭರವಸೆ ಸಂಘಕ್ಕೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಪಿ. ರಾಮಕೃಷ್ಣ, ಪ್ರಧಾನ ವಕ್ತಾರ ಶಾಂತರಾಮ ವಿಟ್ಲ, ರಾಜ್ಯ ಕಾರ್ಯದರ್ಶಿ ವೆಂಕಟರಮಣ ಭಟ್, ಪುತ್ತೂರು ಘಟಕದ ಅಧ್ಯಕ್ಷ ಎಂ. ವಿಶ್ವನಾಥ ರೈ ಉಪಸ್ಥಿತರಿದ್ದರು.