ಹೊಸ ವೈರಸ್ ಪ್ರಬೇಧ ಪತ್ತೆ ಹಿನ್ನೆಲೆ : ಕೇರಳ-ಕರ್ನಾಟಕ ಗಡಿಯಲ್ಲಿ ಮತ್ತೆ ತಪಾಸಣೆ ಬಿಗಿ
ಮಂಜೇಶ್ವರ: ಹೊಸ ವ್ಯೆರಸ್ ಪ್ರಬೇಧ ಓಮಿಕ್ರಾಮ್ ಭೀತಿಯ ನಡುವೆ ಕರ್ನಾಟಕ ಬಿಗು ನಿಯಂತ್ರಣ ಹೇರಿದ್ದು, ಅಂತರ್ ರಾಜ್ಯ ಗಡಿಗಳಲ್ಲಿ ಕಠಿಣ ತಪಾಸಣೆ ಬಿಗಿಗೊಳಿಸಿದೆ. ಕರ್ನಾಟಕ ಸರ್ಕಾರ ತುಸು ಹೆಚ್ಚೇ ಕಾಳಜಿ ವಹಿಸತೊಡಗಿದ್ದು, ಗಲಿಬಿಲಿಗೊಳಗಾದಂತೆ ಕಂಡುಬಂದಿದೆ. ಜೊತೆಗೆ ದಕ್ಷಿಣ ಕನ್ನಡ ಸಹಿತ ಅಂತರ್ ರಾಜ್ಯ ಗಡಿಗಳಲ್ಲಿ ನಿಗಾ ವಹಿಸಲು ಸೂಚಿಸಲಾಗಿದೆ.
ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ತಲಪಾಡಿ ಗಡಿಯಲ್ಲಿ ಕೇರಳದ ಕಡೆಯಿಂದ ಆಗಮಿಸುವ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದ್ದರೂ, ಕೋವಿಡ್ ಆರ್ಟಿಪಿಸಿ ಆರ್ ವರದಿ ಕಡ್ಡಾಯಗೊಳಿಸಲಾಗಿದೆ. ಭಾನುವಾರ ಬೆಳಗ್ಗಿನಿಂದಲೇ ಎಲ್ಲಾ ವಾಹನ ಚಾಲಕರಿಗೂ ಎಚ್ಚರಿಕೆಯನ್ನು ನೀಡಲಾಗುತಿದ್ದು, ಇಂದು ಸೋಮವಾರದಿಂದ ಗಡಿಯಲ್ಲಿ ನೆಗಟಿವ್ ಸರ್ಟ್ ಫಿಕೇಟ್ ಇಲ್ಲದೆ ಗಡಿ ದಾಟುವಂತಿಲ್ಲ. ಹಠಾತ್ ನಿರ್ಧಾರದಿಂದ ಭಾನುವಾರ ಬೆಳಿಗ್ಗೆ ಈ ಬಗ್ಗೆ ಅರಿವಿರದ ಅನೇಕರು ತಲಪಾಡಿಯಿಂದಲೇ ಮತ್ತೆ ಹಿಂದೆ ಬರುವಂತಾದ ಹಿನ್ನೆಲೆಯಲ್ಲಿ ಸೋಮವಾರದಿಂದ ಕಡ್ಡಾಯಗೊಳಿಸಲಾಗಿದೆ. ಕೆಎಸ್ಆರ್ಟಿಸಿ ಸೇವೆ ಸಾಮಾನ್ಯವಾಗಿದ್ದರೂ, ಪ್ರಯಾಣಿಕರನ್ನು ತಪಾಸಣೆ ಮಾಡಿ ಬಿಡಲಾಗುತ್ತಿದೆ. ಕಳೆದ ಎಂಟು ದಿನಗಳ ಹಿಂದೆಯಷ್ಟೇ ಅಂತರ್ ರಾಜ್ಯ ಸಾಮಾನ್ಯ ಸಂಚಾರ ಆರಂಭಗೊಂಡಿದ್ದು, ಅಲ್ಪಾವಧಿಯಲ್ಲೇ ಮತ್ತೆ ಗಡಿ ನಿಯಂತ್ರಣ ಭೀತಿ ಕಾಸರಗೋಡಿಗರಿಗೆ ಕಂಠಕವಾಗಿ ಪರಿಣಮಿಸಿದೆ. ಇಂದು ಬೆಳಿಗ್ಗೆಯಿಂದಲೇ ಕೇರಳದಿಂದ ಆಗಮಿಸುತ್ತಿರುವ ವಿದ್ಯಾರ್ಧಿಗಳು ಸಹಿತ ಸಹಸ್ರಾರು ಯಾತ್ರಿಕರು ಕಂಗಾಲಾಗಿದ್ದಾರೆ.