ಕಾರ್ಪೋರೇಟ್ ಕಂಪೆನಿಗಳಿಂದ ದೇಶ ಉಳಿಸಿ – CITU ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ

ದೇಶದ ಸಂಪತ್ತನ್ನು ಕಬಳಿಸುತ್ತಿರುವ ಕಾರ್ಪೋರೇಟ್ ಕಂಪೆನಿಗಳ ವಿರುದ್ಧ ಹಾಗೂ ಕೇಂದ್ರ ಸರಕಾರದ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ,CITU ನೇತೃತ್ವದಲ್ಲಿ ನಗರದಲ್ಲಿಂದು ಕ್ಲಾಕ್ ಟವರ್ ಬಳಿಯಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಕ್ವಿಟ್ ಇಂಡಿಯಾ ಚಳುವಳಿಯ ದಿನವಾದ ಇಂದು ದೇಶಾದ್ಯಂತ ರೈತ ಕಾರ್ಮಿಕರು ಜಂಟಿಯಾಗಿ ಹಮ್ಮಿಕೊಂಡ ಕಾರ್ಪೋರೇಟ್ ಕಂಪೆನಿಗಳಿಂದ ದೇಶವನ್ನು ಉಳಿಸಿ ದಿನಾಚರಣೆಯ ಭಾಗವಾಗಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರಕಾರಗಳ ಜನವಿರೋಧಿ ನೀತಿಗಳನ್ನು ಧಿಕ್ಕರಿಸಿ ಘೋಷಣೆಗಳನ್ನು ಕೂಗುತ್ತಾ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ಕರ್ನಾಟಕ ರಾಜ್ಯ ಉಪಾಧ್ಯಕ್ಷರಾದ ವಸಂತ ಆಚಾರಿಯವರು, ಉತ್ತಮ ಆಡಳಿತ ನೀಡುವುದಾಗಿ, ಅಚ್ಚೇದಿನ್ ತರುವುದಾಗಿ ಜನತೆಗೆ ಆಶ್ವಾಸನೆ ನೀಡಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರಕಾರವು,ಜನತೆಗೆ ಮೋಸ ಮಾಡಿರುವುದಲ್ಲದೆ, ದೇಶದ ಸಂಪತ್ತನ್ನು ಕಾರ್ಪೋರೇಟ್ ಕಂಪೆನಿಗಳಿಗೆ ದೋಚಲು ಮುಕ್ತ ಅವಕಾಶವನ್ನು ನೀಡಿದೆ.ಹಾಗೂ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ್ರೋಹದ ಕ್ರತ್ಯ ಎಸಗುತ್ತಿದೆ.ಶಿಕ್ಷಣ,ಆರೋಗ್ಯ, ರಕ್ಷಣೆ,ರೈಲ್ವೇ,ವಿದ್ಯುತ್,ಆರ್ಥಿಕ ವಲಯ ಸೇರಿದಂತೆ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನೇ ವಿನಾಶದ ಅಂಚಿಗೆ ತಂದು ನಿಲ್ಲಿಸಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

CITU ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ರವರು ಮಾತನಾಡುತ್ತಾ, ಕೊರೋನಾ ಸಂಕಷ್ಟದ ಕಾಲಘಟ್ಟದಲ್ಲಿ ಜನರ ಬದುಕಿಗೆ ಸ್ಪಂದಿಸುವ ಬದಲು,ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿರುವುದು ಮಾತ್ರವಲ್ಲದೆ,ಇದೇ ಸಂದರ್ಭವನ್ನು ಬಳಸಿ,ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಆಕ್ರಮಣಕಾರಿಯಾಗಿ ಜಾರಿಗೊಳಿಸುವ ಮೂಲಕ ತನ್ನ ಫ್ಯಾಸಿಸ್ಟ್ ಧೋರಣೆಯ ನಿಜ ಸ್ವರೂಪವನ್ನು ಅನಾವರಣಗೊಳಿಸಿದೆ.ಆಳುವ ವರ್ಗಗಳ ಸಮಗ್ರವಾದ ನೀತಿಗಳನ್ನು ಬದಲಾವಣೆಗೊಳಿಸುವ ಮೂಲಕ ದುಡಿಯುವ ಜನತೆಯ ಪರವಾದ ರಾಜಕೀಯ ಧೋರಣೆಯನ್ನು ಜಾರಿಗೊಳಿಸಲು ದೇಶದ ಜನತೆ ಒಂದಾಗಿ ಹೋರಾಡಬೇಕಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ಬಾಬು ದೇವಾಡಿಗ,ಭಾರತಿ ಬೋಳಾರ,ಯೋಗೀಶ್ ಜಪ್ಪಿನಮೊಗರು,ಜಯಲಕ್ಷ್ಮಿ ಜಪ್ಪಿನಮೊಗರು,DYFI ಜಿಲ್ಲಾ ನಾಯಕರಾದ ಸಂತೋಷ್ ಬಜಾಲ್, ನವೀನ್ ಕೊಂಚಾಡಿ, ದಲಿತ ಹಕ್ಕುಗಳ ಸಮಿತಿಯ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕ್ರಷ್ಣ ತಣ್ಣೀರುಬಾವಿ ಮುಂತಾದವರು ಭಾಗವಹಿಸಿದ್ದರು.

ಪ್ರತಿಭಟನೆಯ ನೇತ್ರತ್ವವನ್ನು CITU ಮಂಗಳೂರು ನಗರ ಮುಖಂಡರಾದ ರವಿಚಂದ್ರ ಕೊಂಚಾಡಿ, ದಿನೇಶ್ ಶೆಟ್ಟಿ, ಸಂತೋಷ್ ಆರ್.ಎಸ್, ಅಹಮ್ಮದ್ ಭಾವ,ಮುಸ್ತಫಾ, ಸಿರಾಜ್,ಉಮಾವತಿ,ಶಬನಾ,ಸುಕನ್ಯಾ,ಪುಷ್ಪ, ನಾಗೇಶ್ ಕೋಟ್ಯಾನ್,ಅಶೋಕ್ ಶ್ರೀಯಾನ್,ದಯಾನಂದ ಕೊಪ್ಪಲಕಾಡು ಮುಂತಾದವರು ವಹಿಸಿದ್ದರು.

Related Posts

Leave a Reply

Your email address will not be published.