ಕಾರ್ಕಳ: ವೃತ್ತಿಪರ ಛಾಯಾಗ್ರಹಣ ಕ್ಷೇತ್ರದಲ್ಲಿ ಸುಮಾರು 44 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿರುವ ಹಿರಿಯ ಛಾಯಾಗ್ರಾಹಕ ಹಾಗೂ ಮಾಧ್ಯಮ ವರದಿಗಾರ ಶ್ರೀ ಕೆ. ಎಂ. ಖಲೀಲ್ ಕಾರ್ಕಳ ಅವರಿಗೆ ‘ಛಾಯಾ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಲು ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ.) ದಕ್ಷಿಣ ಕನ್ನಡ–ಉಡುಪಿ ಜಿಲ್ಲೆ, ಕಾರ್ಕಳ ವಲಯ ನಿರ್ಧರಿಸಿದೆ.
ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಆಗಸ್ಟ್ 19ರಂದು ಬುಧವಾರ ಸಾಲ್ಮರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಗೌರವ ಸನ್ಮಾನ ನೆರವೇರಲಿದೆ.
1982ರಿಂದ ವೃತ್ತಿಪರ ಛಾಯಾಗ್ರಾಹಕರಾಗಿ ಸೇವೆ ಆರಂಭಿಸಿದ ಕೆ.ಎಂ. ಖಲೀಲ್ ಅವರು ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ. ಪ್ರತಿಷ್ಠಿತ ಎಸ್.ಕೆ.ಪಿ.ಎ.ಯ ಸಕ್ರಿಯ ಸದಸ್ಯರಾಗಿ ಹಾಗೂ ಕಾರ್ಕಳ ವಲಯದ ಅಧ್ಯಕ್ಷರಾಗಿ ಸಂಸ್ಥೆಯ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ.
ಛಾಯಾಗ್ರಹಣದ ಮೂಲಕ ಸಾಮಾಜಿಕ ಕಳಕಳಿಯನ್ನೂ ವ್ಯಕ್ತಪಡಿಸಿರುವ ಖಲೀಲ್ ಅವರು ಸಾರ್ವಜನಿಕ ಸಮಸ್ಯೆಗಳು, ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ಜನರ ನೋವು–ನಲಿವುಗಳನ್ನು ಸಚಿತ್ರ ವರದಿಗಳ ಮೂಲಕ ಬೆಳಕಿಗೆ ತಂದಿದ್ದಾರೆ. ಇಂತಹ ವರದಿಗಳ ಮೂಲಕ ಅಧಿಕಾರಿಗಳು ಹಾಗೂ ಸರಕಾರದ ಗಮನ ಸೆಳೆದು ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅಲೆಮಾರಿ ಸಮುದಾಯದ ಶಿಕ್ಷಣದಿಂದ ವಂಚಿತರಾಗಿದ್ದ ಮಕ್ಕಳನ್ನು ಗುರುತಿಸಿ ಶಾಲೆಗೆ ಸೇರಿಸುವುದು, ಬಡ ಕುಟುಂಬಗಳಿಗೆ ಸರಕಾರಿ ಸವಲತ್ತುಗಳನ್ನು ತಲುಪಿಸುವುದು ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ. ಕಳೆದ ಸುಮಾರು 20 ವರ್ಷಗಳಿಂದ ಮಂಗಳೂರಿನ V4 ಸುದ್ದಿ ವಾಹಿನಿಯ ಕಾರ್ಕಳ ತಾಲೂಕು ವರದಿಗಾರರಾಗಿ ನಿಷ್ಪಕ್ಷಪಾತವಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೆ.ಎಂ. ಖಲೀಲ್ ಅವರಿಗೆ ಅಜೆಕಾರು ಆದಿ ಗ್ರಾಮೋತ್ಸವ ಸಾಹಿತ್ಯ ಸಮ್ಮೇಳನದ ‘ಆದಿ ಗ್ರಾಮೋತ್ಸವ ಯುವ ಸಿರಿ ಪ್ರಶಸ್ತಿ’, ಯುಗಪುರುಷ ಕಿನ್ನಿಗೋಳಿ ಕಥಾ ಬಿಂದು ಪ್ರಕಾಶನದ ‘ಕರ್ನಾಟಕ ಸಾಧನ ರತ್ನ ಪ್ರಶಸ್ತಿ’, ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ, ಮಹಿಳಾ ಧ್ವನಿ ಹಾಗೂ ಗ್ರಾಮೀಣ ಕ್ಷೇಮಾಭಿವೃದ್ಧಿ ಸಂಸ್ಥೆ ಬೆಂಗಳೂರು ವತಿಯಿಂದ ‘ಕರುನಾಡ ರತ್ನ ಪ್ರಶಸ್ತಿ’, ಹೈಬ್ರಿಡ್ ನ್ಯೂಸ್ ಕನ್ನಡ ಸುದ್ದಿ ವಾಹಿನಿ ಕೊಪ್ಪಳ ಸಂಸ್ಥೆಯಿಂದ ‘ಮಾಧ್ಯಮ ರತ್ನ ಪ್ರಶಸ್ತಿ’ ಸೇರಿದಂತೆ ಹಲವು ಗೌರವಗಳು ಲಭಿಸಿವೆ.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್, ಕಾರ್ಕಳ ವಲಯದ ಅಧ್ಯಕ್ಷ ಪ್ರಮೋದಚಂದ್ರ ಪೈ, ಪ್ರಧಾನ ಕಾರ್ಯದರ್ಶಿ ಶೇಖರ್ ಕುಕ್ಕುಜೆ, ಕೋಶಾಧಿಕಾರಿ ವಿ.ಆರ್. ಸತೀಶ್ ಆಚಾರ್ಯ ಸೇರಿದಂತೆ ಅಧ್ಯಕ್ಷರು, ಸಲಹಾ ಸಮಿತಿ, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಕೆ.ಎಂ. ಖಲೀಲ್ ಅವರ ಸಾಧನೆಯನ್ನು ಅಭಿನಂದಿಸಿ ಗೌರವ ಸನ್ಮಾನಕ್ಕೆ ಆಯ್ಕೆ ಮಾಡಿದ್ದಾರೆ.

