ಬಿ.ಸಿ ರೋಡ್‌ನಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

ಬಂಟ್ವಾಳ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗ ಕೋವಿಡ್ ಮಾರ್ಗಸೂಚಿಯನ್ವಯ ಸರಳವಾಗಿ ಆಚರಿಸಲಾಯಿತು.


ಬಂಟ್ವಾಳ ತಹಸೀಲ್ದಾರ್ ರಶ್ಮಿ ಎಸ್. ಆರ್ ಧ್ವಜಾರೋಹಣ ನೆರವೇರಿಸಿದರು. ಶಾಸಕ ರಾಜೇಶ್ ನಾಕ್, ಡಿವೈಎಸ್ಪಿ ವೆಲೈಂಟೀನ್ ಡಿಸೋಜಾ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಉಪಸ್ಥಿತರಿದ್ದರು. ಬಂಟ್ವಾಳ ಪೋಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ಗೃಹರಕ್ಷಕದಳ ಸಿಬ್ಬಂದಿಗಳು ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿದರು. ತಾಲೂಕು ಕಚೇರಿ ಸಿಬ್ಬಂದಿಗಳು ಶ್ವೇತವರ್ಣದ ಸಾಂಪ್ರದಾಯಿಕ ವಸ್ತ್ರ ತೊಟ್ಟು ಗಮನ ಸೆಳೆದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಶಾಸಕ ರಾಜೇಶ್ ನಾಕ್ ಮಾತನಾಡಿ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹೇಳುವ ನಾವು ಸ್ವಾತಂತ್ರ್ಯ ಕಳೆದುಕೊಂಡ ಕಾರಣವನ್ನೂ ಯುವ ಜನರಿಗೆ ಹೇಳಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪೂರ್ಣ ಅಂಕಗಳನ್ನು ಪಡೆದ ಪ್ರತೀಕ್ ಮಲ್ಯ ರನ್ನು ಅಭಿನಂದಿಸಿದ ಅವರು, ಈ ಬಾರಿ ಬಂಟ್ವಾಳ ತಾಲೂಕು ಜಿಲ್ಲೆಯಲ್ಲಿ ಮೂರನೇ ಸ್ಥಾನ ಪಡೆದಿರುವುದು ಹೆಮ್ಮೆಯ ವಿಚಾರ ಎಂದರು. ಇದೇ ಮೊದಲ ಬಾರಿ 24 ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ , ಯುಕೆಜಿ ತರಗತಿ ಆರಂಭಿಸಲು ಸರ್ಕಾರ ಅನುಮತಿ ನೀಡಿದ್ದು, ಎಲ್ಲಾ ಎಸ್‌ಡಿಎಂ ಸಿಗಳು ಕ್ರಿಯಾಶೀಲತೆಯಿಂದ ಅನುಷ್ಠಾನಗೊಳಿಸುವಂತೆ ಅವರು ಸಲಹೆ ನೀಡಿದರು.
ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ರಶ್ಮೀ ಎಸ್ ಆರ್ ಸಂದೇಶ ನೀಡಿ ಸರ್ಕಾರದ ಮಾರ್ಗ ಸೂಚಿಯನ್ನು ಪಾಲಿಸುವ ಮೂಲಕ ಕರೋನಾ ವಿರುದ್ಧವೂ ಏಕತೆಯ ಹೋರಾಟ ನಡೆಸೋಣ ಎಂದರು. ನಮ್ಮ ನಡುವಿನ ಭಿನ್ನ ಭಿನ್ನವಾದ ಮನೋಭಾವದಿಂದ ನಾವು ಪರಕೀಯರ ಆಡಳಿತಕ್ಕೆ ತುತ್ತಾಗಿದ್ದೇವು, ಅದಕ್ಕಾಗಿ ಹೋರಾಟ ನಡೆಸಿದ ಎಲ್ಲರನ್ನೂ ಸ್ಮರಿಸುವ ಮೂಲಕ ಸ್ವಾತಂತ್ರ್ಯ ವನ್ನು ಉಳಿಸೋಣ ಎಂದರು.
ವೇದಿಕೆಯಲ್ಲಿ ಡಿವೈಎಸ್ಪಿ ವೆಲೈಂಟೀನ್ ಡಿಸೋಜಾ, ಬೂಡಾ ಅಧ್ಯಕ್ಷ ದೇವದಾಸ್ ಶೆಟ್ಟಿ, ತಾಲೂಕು ಕೃಷಿ ಇಲಾಕೆಯ ಸಹಾಯಕ ನಿರ್ದೇಶಕ ಚೆನ್ನಕೇಶವ ಮೂರ್ತಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ರಾಜಣ್ಣ ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.