ಮಂಗಳೂರು: ರಕ್ತದಾನ ಮಹಾದಾನ ಎಂಬ ಸಂದೇಶದೊಂದಿಗೆ ಮಂಗಳೂರಿನ ಬಂದರ್ ಫ್ರೆಂಡ್ಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ನಗರದ ಬಂದರಿನ ಝೀನತ್ ಬಕ್ಸ್ ಯತೀಮ್ ಖಾನಾ ಹಾಲ್ನಲ್ಲಿ ಯೆನೆಪೋಯ ಸ್ಪೆಷಾಲಿಟಿ ಆಸ್ಪತ್ರೆ, ಕೊಡಿಯಾಲ್ಬೈಲ್ ಹಾಗೂ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿ ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಹಾಗೂ ಮಾಜಿ ಮೇಯರ್ ಕೆ. ಅಶ್ರಫ್, ರಕ್ತದಾನದಿಂದ ಮತ್ತೊಬ್ಬರ ಅಮೂಲ್ಯ ಜೀವವನ್ನು ಉಳಿಸಲು ಸಾಧ್ಯವಿದೆ. ಇದೊಂದು ಶ್ರೇಷ್ಠ ಸಮಾಜಮುಖಿ ಕಾರ್ಯವಾಗಿದ್ದು, ಹಲವು ಸಂಘಟನೆಗಳು ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿವೆ. ಬಂದರ್ ಫ್ರೆಂಡ್ಸ್ ಕೂಡ ಇಂತಹ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ ಮಾತನಾಡಿ, ಬಂದರ್ ಫ್ರೆಂಡ್ಸ್ ಸಂಘಟನೆಯು ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲೂ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಘಟನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆಯುವಂತಾಗಲಿ ಎಂದು ಆಶಿಸಿದರು.
ಇದೇ ಸಂದರ್ಭದಲ್ಲಿ ಮೂಡ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಂದರಿನ ಬೂಬುಕ ಜುಮ್ಮಾ ಮಸೀದಿಯ ಖತೀಬ್ ಹಾಜಿ ಸಿರಾಜುದ್ದೀನ್ ಫೈಝಿ ಅವರು ದುವಾ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಯೆನೆಪೋಯ ಗ್ರೂಪ್ ನಿರ್ದೇಶಕ ಯೆನೆಪೋಯ ಅಬ್ದುಲ್ಲಾ ಜಾವೀದ್, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಶಂಶುದ್ದೀನ್ ಕಂಡತ್ಪಳ್ಳಿ, ಮಾಜಿ ಕಾರ್ಪೊರೇಟರ್ ಹಾಜಿ ಶಂಶುದ್ದೀನ್, ಬಂದರ್ ಫ್ರೆಂಡ್ಸ್ ಅಧ್ಯಕ್ಷ ಎಂ.ಕೆ. ಫಯಾಝ್, ಗೌರವಾಧ್ಯಕ್ಷ ಶಿಹಾಬ್ ಎ.ಆರ್., ಕೋಶಾಧಿಕಾರಿ ಅಬ್ದುಲ್ ಸತ್ತಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ರಕ್ತದಾನದ ಮೂಲಕ ಜೀವ ಉಳಿಸುವ ಮಹತ್ವದ ಸಂದೇಶ ಸಾರಿದ ಬಂದರ್ ಫ್ರೆಂಡ್ಸ್ ಸಂಘಟನೆಯ ಈ ಸಮಾಜಮುಖಿ ಕಾರ್ಯಕ್ರಮ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು. ರಕ್ತದಾನದ ಮಹತ್ವದ ಜೊತೆಗೆ ಸೇವಾ ಮನೋಭಾವವನ್ನು ಉತ್ತೇಜಿಸುವ ಉದ್ದೇಶದೊಂದಿಗೆ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು.

