HomeFresh Newsಶ್ರೀ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಇಂದು 22ನೇ ವರ್ಷದ ಚಾತುರ್ಮಾಸ್ಯ ವ್ರತಾರಂಭ

ಶ್ರೀ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಇಂದು 22ನೇ ವರ್ಷದ ಚಾತುರ್ಮಾಸ್ಯ ವ್ರತಾರಂಭ

ಉಡುಪಿ, ಜುಲೈ 29: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ 22ನೇ ವರ್ಷದ ಚಾತುರ್ಮಾಸ್ಯ ವ್ರತವು ಇಂದು (ಜುಲೈ 29) ಉಡುಪಿ ಜಿಲ್ಲೆಯ ಕಟಪಾಡಿ ಸಮೀಪದ ಪಡುಕುತ್ಯಾರಿನ ಶ್ರೀ ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಶುಭಾರಂಭಗೊಂಡಿತು. ಈ ಚಾತುರ್ಮಾಸ್ಯ ವ್ರತವು ಸೆಪ್ಟೆಂಬರ್ 26ರವರೆಗೆ ನಡೆಯಲಿದೆ.
ವ್ರತಾರಂಭದ ಅಂಗವಾಗಿ ಬೆಳಿಗ್ಗೆ ಶ್ರೀಕರಾರ್ಚಿತ ದೇವತಾ ಪೂಜೆ ಹಾಗೂ ಶ್ರೀ ವಿಶ್ವಕರ್ಮ ಯಜ್ಞ, ಚಾತುರ್ಮಾಸ್ಯ ವ್ರತ ಸಂಕಲ್ಪ ಮತ್ತು ಶ್ರೀ ಗುರುಪಾದುಕಾ ಪೂಜೆ ನೆರವೇರಿತು. ಬಳಿಕ ಧಾರ್ಮಿಕ ಸಭೆ ನಡೆಯಿತು.
ಚಾತುರ್ಮಾಸ್ಯದ ಅವಧಿಯಲ್ಲಿ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ದುರ್ಗಾ ನಮಸ್ಕಾರ ಪೂಜೆ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಗುರುಪಾದುಕಾ ಪೂಜೆಯ ಬಳಿಕ ಉಪನ್ಯಾಸ ಮಾಲಿಕೆ ಹಾಗೂ ಮಧ್ಯಾಹ್ನದಿಂದ ವಿವಿಧ ದೇವಸ್ಥಾನಗಳು ಮತ್ತು ಸಂಘ-ಸಂಸ್ಥೆಗಳ ವತಿಯಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸೇವಾ ಕಾರ್ಯಕ್ರಮಗಳು ನಡೆಯಲಿವೆ.
ಚಾತುರ್ಮಾಸ್ಯದ ಅಂಗವಾಗಿ ಆಗಸ್ಟ್ 9ರಂದು ಶ್ರೀಗುರುಗಳ ಸುವರ್ಣ ಜನ್ಮವರ್ಧಂತಿ ಮಹೋತ್ಸವ ಆರಂಭ, ಆಗಸ್ಟ್ 23ರಂದು ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಸಮಾರಂಭ, ಸೆಪ್ಟೆಂಬರ್ 20ರಂದು ಅಷ್ಟೋತ್ತರ ಸಹಸ್ರ ಮೃತ್ತಿಕಾ ಲಿಂಗಾರ್ಚನೆ ಹಾಗೂ ವಿಶೇಷ ವೈದಿಕ ಕಾರ್ಯಕ್ರಮ, ಸೆಪ್ಟೆಂಬರ್ 26ರಂದು ಸೀಮೋಲ್ಲಂಘನ, ಧಾರ್ಮಿಕ ಸಭೆ ಹಾಗೂ ಚಾತುರ್ಮಾಸ್ಯ ಸಮಾರೋಪ ಕಾರ್ಯಕ್ರಮಗಳು ನಡೆಯಲಿವೆ.
ಈ ಪವಿತ್ರ ಚಾತುರ್ಮಾಸ್ಯ ಪರ್ವಕಾಲದಲ್ಲಿ ಭಕ್ತರು ಸಕುಟುಂಬ ಸಮೇತರಾಗಿ ಆಗಮಿಸಿ ಶ್ರೀ ಗುರುಪಾದುಕಾ ಪೂಜೆಯಲ್ಲಿ ಭಾಗವಹಿಸಿ ಶ್ರೀ ಜಗದ್ಗುರುಗಳ ದಿವ್ಯ ಅನುಗ್ರಹಕ್ಕೆ ಪಾತ್ರರಾಗುವಂತೆ ಪೀಠದ ವತಿಯಿಂದ ಆಹ್ವಾನಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments