ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯು ತನ್ನ ಮೊದಲ ಸೆಂಟ್ರಿಪ್ಯೂಗೇಶನ್ ಆಧಾರಿತ ಥೆರಪ್ಯೂಟಿಕ್ ಪ್ಲಾಸ್ಮಾ ಎಕ್ಸ್ಚೇಂಜ್ ಕ್ರಿಯೆಯನ್ನು ಯಶಸ್ವಿಯಾಗಿ ನೆರವೇರಿಸಿ ಮಹತ್ವದ ವೈದ್ಯಕೀಯ ಮೈಲಿಗಲ್ಲು ದಾಖಲಿಸಿದೆ.ನ್ಯೂರೋಮ್ಯೆಯೆಲಿಟಿಸ್ ಆಪ್ಟಿಕಾ ಕಾಯಿಲೆಯಿಂದ ಬಳಲುತ್ತಿರುವ 19 ವರ್ಷದ ಮಹಿಳಾ ರೋಗಿಗೆ ಏಕಾಏಕಿ ಎಡಕಣ್ಣಿನ ದೃಷ್ಟಿಹೀನತೆ ಉಂಟಾಗಿದ್ದು ಅದು ಅವಳ ಏಕೈಕ ಕಾರ್ಯ ನಿರ್ವಹಣೆಯ ಕಣ್ಣು ಆಗಿತ್ತು.
ಇಂಟ್ರಾವೀನಸ್ ಪಲ್ಸ್ ಸ್ಟಿರಾಯ್ಡ್ ಚಿಕಿತ್ಸೆಗೆ ಸ್ಪಂದನೆ ಕಾಣಿಸದ ಕಾರಣ ಶಾಸ್ವತ ಕುರುಡುತನದ ಅಪಾಯ ಎದುರಿಸಬೇಕಾಯಿತು. ಈ ಸಂದರ್ಭದಲ್ಲಿ ನ್ಯೂರೋಲಜಿ ವಿಭಾಗವು ಇಮ್ಯುನೋ ಹೆಮಾಟಾಲಜಿ ಮತ್ತು ರಕ್ತ ವರ್ಗಾವಣೆ ವಿಭಾಗದೊಂದಿಗೆ ಸಹಕರಿಸಿ ಅಫರಿಸಿಸ್ ತಂತ್ರದಿಂದ ಸೆಂಟ್ರಿಪ್ಯೂಗೇಶನ್ ಆಧಾರಿತ ಥೆರಪ್ಯೂಟಿಕ್ ಪ್ಲಾಸ್ಮಾ ಎಕ್ಸ್ಚೇಂಜ್ ಚಿಕಿತ್ಸೆಯನ್ನು ಆರಂಭಿಸಿತು.
ಈ ಚಿಕಿತ್ಸಾ ವಿಧಾನವು ರಕ್ತವನ್ನು ವೇಗವಾಗಿ ವಿಭಜಿಸಿ ಪ್ಲಾಸ್ಮಾಅಂಶಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುವ ಮೂಲಕ ಅಂತಹ ರೋಗಕಾರಕ ಆಂಟಿ ಬಾಡಿಗಳನ್ನು ನಿವಾರಿಸುತ್ತದೆ. ಈ ವಿಧಾನವು ರಕ್ತದಲ್ಲಿರುವ ಆಂಟಿಬಾಡಿಗಳನ್ನು ನೇರವಾಗಿ ತೆಗೆದು ಹಾಕುವುದರಿಂದ ಇಂಟ್ರಾವೆನಸ್ ಇಮ್ಯುನೊಗ್ಲೊಬಿನ್ ಚಿಕಿತ್ಸೆಯೊಂದಿಗೆ ಹೋಲಿಸಿದರೆ ಹೆಚ್ಚು ಪರಿಣಾಮಕಾರಿಯಾಗಿದೆ. ಆರಂಭಿಕ ಹಂತದಲ್ಲೆ ನೀಡಿದರೆ ಚೇತರಿಕೆಯ ಸಾಧ್ಯತೆಗಳು ಗಣನೀಯವಾಗಿ ಹೆಚ್ಚುತ್ತವೆ.
ಈ ಯಶಸ್ಸಿನ ಹಿಂದೆ ಬಹುಶಿಸ್ತೀಯ ತಂಡದ ಪ್ರಯತ್ನ ಅಡಗಿದೆ. ಈ ತಂಡದಲ್ಲಿ ನ್ಯೂರೋಲಜಿ ವಿಭಾಗದ ಡಾ. ಸಲ್ಮಾ ಸುಹಾನಾ ಮತ್ತು ಡಾ. ವಿಘ್ನೇಶ್, ಕ್ರಿಟಿಕಲ್ ಮೆಡಿಸಿನ್ ವಿಭಾಗದ ಡಾ. ಪೂರ್ಣಾ, ಅರಿವಳಿಕೆ ತಜ್ಞ ಡಾ. ಇಜಾಜ್ ಅಹಮದ್, ನೇತ್ರ ತಜ್ಞೆ ಡಾ. ವಿದ್ಯಾ ಹೆಗ್ಡೆ ಭಾಗವಹಿಸಿದ್ದರು. ಈ ಪ್ರಕ್ರಿಯೆಯನ್ನು ರಕ್ತನಿಧಿಯ ಮುಖ್ಯಸ್ಥೆ ಡಾ. ವಿದ್ಯರೇಖಾ ಕಾಮತ್ರವರ ಮಾರ್ಗದರ್ಶನದಲ್ಲಿ ನೆರವೇರಿಸಲಾಯಿತು. ಐದು ಸೈಕಲ್ ಚಿಕಿತ್ಸೆಯ ನಂತರ ರೋಗಿಯ ದೃಷ್ಟಿಯಲ್ಲಿ ಗಮನಾರ್ಹ ಚೇತರಿಕೆ ಕಂಡು ಬಂದಿದೆ .
ಈ ಯಶಸ್ಸಿನ ಪ್ರಕರಣವು ನ್ಯೂರೋ ಇನ್ ಫ್ಲಮೇಟರಿ ರೋಗದ ನಿರ್ವಹಣೆಯಲ್ಲಿ ಸಮಗ್ರ ವೈದ್ಯಕೀಯ ಸಹಕಾರವನ್ನು ಒತ್ತಿ ಹೇಳುತ್ತದೆ, ಜೊತೆಗೆ ಅತ್ಯಾಧುನಿಕ ಚಿಕಿತ್ಸಾ ವಿಧಾನಗಳನ್ನು ಯಶಸ್ವಿಯಾಗಿ ಜಾರಿಗೆ ತರುವಲ್ಲಿ ಯೆನೆಪೋಯ ಆಸ್ಪತ್ರೆಯ ರಕ್ತ ನಿಧಿಯು ವಿಸ್ತರಿಸುತ್ತಿರುವ ಸಾಮರ್ಥ್ಯವನ್ನು ಇದು ಸಾಬೀತು ಪಡಿಸುತ್ತಿದೆ .
ಈ ಚಿಕಿತ್ಸಾ ಪ್ರಕ್ರಿಯೆಯನ್ನು ನಡೆಸಲು ಹೆಚ್ಚಿನ ತಾಂತ್ರಿಕ ನಿಖರತೆ ಹಾಗೂ ನಿರಂತರ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಿದೆ. ಈ ಸೇವೆಯನ್ನು ಸ್ಥಳೀಯವಾಗಿ ಒದಗಿಸುವ ಮೂಲಕ ನ್ಯೂರೋಲಜಿಕಲ್ ತುರ್ತುಪರಿಸ್ಥಿತಿಗಳಲ್ಲಿ ದೂರ ಪ್ರಯಾಣಿಸಬೇಕಾದ ಅಗತ್ಯವಿಲ್ಲದೆ ರೋಗಿಗಳಿಗೆ ಸಮಯೋಚಿತ ಮತ್ತು ಜೀವನೋದ್ಧಾರಕ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ವೈದ್ಯಕೀಯ ತಂಡ ತಿಳಿಸಿದೆ.
