HomeFresh Newsಯುಎಇಯಲ್ಲಿ ಜನಮನಗೆದ್ದ ಸಮಾಜಸೇವಕ, ಕಲಾಪೋಷಕ ಸತೀಶ್ ಪೂಜಾರಿ ಬೆಳಪು ಅವರಿಗೆ 2026ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ...

ಯುಎಇಯಲ್ಲಿ ಜನಮನಗೆದ್ದ ಸಮಾಜಸೇವಕ, ಕಲಾಪೋಷಕ ಸತೀಶ್ ಪೂಜಾರಿ ಬೆಳಪು ಅವರಿಗೆ 2026ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

ದುಬೈ: ಯುಎಇಯಲ್ಲಿ ಕಳೆದ ಎರಡೂವರೆ ದಶಕಗಳಿಂದ ಸಮಾಜಸೇವೆ, ಕನ್ನಡ-ತುಳು ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಚಾರ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಹೆಮ್ಮೆಯ ಕನ್ನಡಿಗ, ಸಮಾಜಸೇವಕ ಹಾಗೂ ಕಲಾಪೋಷಕ ಶ್ರೀ ಸತೀಶ್ ಪೂಜಾರಿ ಬೆಳಪು ಅವರಿಗೆ 2026ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇವರ ಈ ಸಾಧನೆಗೆ ಅಭಿಮಾನಿಗಳು, ಹಿತೈಷಿಗಳು ಹಾಗೂ ಕನ್ನಡಿಗರ ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.
ಪಯೋನೀರ್ ಇನ್ಶೂರೆನ್ಸ್ ಸಂಸ್ಥೆಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸತೀಶ್ ಪೂಜಾರಿ ಅವರು ವೃತ್ತಿಜೀವನದ ಜೊತೆಗೆ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾಗಿರುವ ಇವರು ‘ನಮ್ಮ ತುಳುವೆರ್’ ಸಂಘಟನೆಯ ಸ್ಥಾಪಕ ಸದಸ್ಯರಾಗಿದ್ದು, ಕರ್ನಾಟಕ ಸಂಘ ಶಾರ್ಜಾ ಹಾಗೂ ಬಿಲ್ಲವಾಸ್ ದುಬೈ ಮತ್ತು ನಾರ್ದರ್ನ್ ಎಮಿರೇಟ್ಸ್‌ನ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.


ಶ್ರೀ ಗುರು ಚಾರಿಟೇಬಲ್ ಟ್ರಸ್ಟ್ ಮೂಲಕ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಅನುಸರಿಸಿ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಗಣನೀಯ ಆರ್ಥಿಕ ನೆರವು ನೀಡುತ್ತಿದ್ದಾರೆ. ಕಳೆದ 10 ವರ್ಷಗಳಿಂದ ಸರ್ಕಾರಿ ಮೀನುಗಾರಿಕಾ ಕಾಲೇಜು, ಪೊಲಿಪು ಇಲ್ಲಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ವಿದ್ಯಾರ್ಥಿವೇತನ ಒದಗಿಸುತ್ತಿದ್ದಾರೆ. ವಿಜಯ ಕಾಲೇಜು, ಮುಲ್ಕಿಯ ವಿದ್ಯಾರ್ಥಿಗಳಿಗೆ ಕಳೆದ ಹಲವಾರು ವರ್ಷಗಳಿಂದ ವಿದ್ಯಾರ್ಥಿವೇತನ, ಅನ್ನದಾನ ನೀಡುವ ಸೇವಾ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ.


ಯುಎಇಯಲ್ಲಿ ನೆಲೆಸಿರುವ ತುಳು-ಕನ್ನಡಿಗರನ್ನು ಒಗ್ಗೂಡಿಸಿ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ. ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಸಂಚಾಲಕರಾಗಿ, ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕದ ಟ್ರಸ್ಟಿಯಾಗಿ, ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಟ್ರಸ್ಟಿಯಾಗಿ ಹಾಗೂ ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಉಡುಪಿ ಸಮಿತಿಯ ಸಕ್ರಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಮಾಜಸೇವೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಕೊಡುಗೆಗಳಿಗಾಗಿ ಅವರಿಗೆ ಚಾಣಕ್ಯ ಪ್ರಶಸ್ತಿ, ಬಿಲ್ಲವ ಶ್ರೀರತ್ನ ಪ್ರಶಸ್ತಿ, ಹೆಮ್ಮೆಯ ಕನ್ನಡಿಗ ಪ್ರಶಸ್ತಿ, ಕಲಾಪೋಷಕ ಪ್ರಶಸ್ತಿ ಹಾಗೂ ಪರಿವರ್ತನ ಶ್ರೀ ರಾಜ್ಯ ಪ್ರಶಸ್ತಿಗಳು ಲಭಿಸಿವೆ.
ಇದಲ್ಲದೆ, ಕರ್ನಾಟಕ ಹಾಗೂ ಹೊರನಾಡಿನ ಕನ್ನಡಿಗರಿಗೆ ದುಬೈಯಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ಮೂಲಕ ಹಲವರ ಬದುಕಿಗೆ ನೆರವಾಗಿದ್ದಾರೆ. ವಿದೇಶದಲ್ಲಿ ನೆಲೆಸಿದ್ದರೂ ತಾಯ್ನಾಡಿನ ಭಾಷೆ, ಸಂಸ್ಕೃತಿ ಮತ್ತು ಸಮಾಜದೊಂದಿಗೆ ತಮ್ಮ ನಂಟನ್ನು ಉಳಿಸಿಕೊಂಡು ಸೇವೆ ಸಲ್ಲಿಸುತ್ತಿರುವುದು ಗಮನಾರ್ಹವಾಗಿದೆ.

ಶ್ರೀ ಸತೀಶ್ ಪೂಜಾರಿ ಬೆಳಪು ಅವರಿಗೆ 2026ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅವರ ದೀರ್ಘಕಾಲದ ಸಮಾಜಮುಖಿ ಮತ್ತು ಸಾಂಸ್ಕೃತಿಕ ಸೇವೆಗೆ ಸಂದ ಗೌರವವಾಗಿದೆ. ಅವರ ಸಾಧನೆಗೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಹಿತೈಷಿಗಳು ಹಾಗೂ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments