ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆಯಾಗಿದ್ದಾರೆ. ಆ ಮೂಲಕ ಕೆಲವು ದಿನಗಳಿಂದ ನಡೆಯುತ್ತಿದ್ದ ಅನಿಶ್ಚಿತತೆ, ಚರ್ಚೆಗಳು ಮತ್ತು ರಾಜಕೀಯ ಅಧಿಕಾರಕ್ಕಾಗಿ ನಡೆದ ಹೋರಾಟಕ್ಕೆ ಕಾಂಗ್ರೆಸ್ ತೆರೆ ಎಳೆದಿದೆ. ಸತೀಶನ್ ಅವರು ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆಯಾಗುತ್ತಿದ್ದಂತೆಯೇ ಕೇರಳದಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷವು 2026ರ ಮೇ 7ರಂದು ತಿರುವನಂತಪುರದಲ್ಲಿ ನಡೆದ ಸಭೆಯಲ್ಲಿ ಕೇರಳ ರಾಜ್ಯದ ಸಿಎಲ್ಪಿಯ ಹೊಸ ನಾಯಕನನ್ನು ನೇಮಿಸಲು ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ನೀಡಲು ಸರ್ವಾನುಮತದಿಂದ ನಿರ್ಧರಿಸಿತ್ತು. ಇದೀಗ ವಿಡಿ ಸತೀಶನ್ ಅವರನ್ನು ಸಿಎಲ್ಪಿ ನಾಯಕರನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ನಾಯಕಿ ದೀಪಾ ದಾಸ್ ಮುನ್ಶಿ ದಿಲ್ಲಿಯಲ್ಲಿ ತಿಳಿಸಿದ್ದಾರೆ.
ಕೇರಳದಲ್ಲಿ ಯುಡಿಎಫ್ ಬಹುಮತವನ್ನು ಪಡೆಯುತ್ತಿದ್ದಂತೆ ವಿಡಿ ಸತೀಶನ್, ಕೆ,ಸಿ ವೇಣು ಗೋಪಾಲ್, ರಮೇಶ್ ಚನ್ನಿತ್ತಲ ಅವರು ಸಿಎಂ ಹುದ್ದೆಯ ಆಕಾಂಕ್ಷಿಯಾಗಿದ್ದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಬಹುಪಾಲು ಸದಸ್ಯರು ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರನ್ನು ಬೆಂಬಲಿಸಿದ್ದಾರೆಂದು ವರದಿಯಾಗಿದ್ದರೂ, 2021ರಲ್ಲಿ ಪಕ್ಷದ ಚುನಾವಣಾ ಹಿನ್ನಡೆಯ ನಂತರ ಕಳೆದ ಐದು ವರ್ಷಗಳಲ್ಲಿ ಪಕ್ಷದ ಪ್ರಮುಖ ಮುಖವಾಗಿ ವಿ.ಡಿ ಸತೀಶನ್ ಹೊರಹೊಮ್ಮಿದ್ದಾರೆ.
