ಉತ್ತರ ಪ್ರದೇಶದ ಮೊರಾದಾಬಾದ್‍ನ ಠಾಕೂರ್ ದ್ವಾರ ಪ್ರದೇಶದಲ್ಲಿ ಈಗಾಗಲೇ ವಿವಾಹವಾದ ವ್ಯಕ್ತಿಯೊಬ್ಬ ರಹಸ್ಯವಾಗಿ ಎರಡನೇ ಮದುವೆಗೆ ಮಾಡಿದ ಪ್ರಯತ್ನವನ್ನು ಮದುವೆಯ ಕೆಲವೇ ಗಂಟೆಗಳ ಮೊದಲು ಸ್ವಂತ ಮಗಳೇ ಹಾಳು ಮಾಡಿದ್ದಾಳೆ. ವರನ ಚಿಕ್ಕ ಮಗಳು ವಧುವಿನ ಕುಟುಂಬಕ್ಕೆ ಕರೆ ಮಾಡಿ ಅವನ ವಂಚನೆಯನ್ನು ಬಹಿರಂಗಪಡಿಸಿದ ಘಟನೆ ನಡೆದಿದೆ. ಆಕೆಯ ಕುಟುಂಬಕ್ಕೆ ತನ್ನ ತಂದೆಯ ಮೊದಲ ಮದುವೆಯನ್ನು ಸಾಬೀತುಪಡಿಸುವ ಕಾನೂನು ದಾಖಲೆಗಳನ್ನು ಒದಗಿಸಿದ್ದಾಳೆ. ಈ ವಿಷಯ ಪೆÇಲೀಸರಿಗೆ ಗೊತ್ತಾದ ಬಳಿಕ ಆರೋಪಿ ವರನಿಗೆ 5.20 ಲಕ್ಷ ರೂ. ದಂಡ ವಿಧಿಸಲಾಯಿತು.
ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ ಈ ಸಿನಿಮೀಯ ಘಟನೆ ಬೆಳಕಿಗೆ ಬಂದಿದೆ. ಇಬ್ಬರು ಮಕ್ಕಳ ತಂದೆಯೊಬ್ಬರು ತಮ್ಮ ಮೊದಲ ಪತ್ನಿಯನ್ನು ವಂಚಿಸಿ ಎರಡನೇ ಮದುವೆಯಾಗಲು ಪ್ರಯತ್ನಿಸಿದರು. ಆದರೆ, ಮದುವೆ ಮೆರವಣಿಗೆ ಹೊರಡುವ ಸ್ವಲ್ಪ ಸಮಯದ ಮೊದಲು ವರನ ಮುಗ್ಧ ಮಗಳು ಚಾಣಾಕ್ಷತನದಿಂದ ವಧುವಿನ ಕುಟುಂಬಕ್ಕೆ ಕರೆ ಮಾಡಿದಳು. ನಂತರ ಕಣ್ಣೀರಿಡುತ್ತಾ ಅವಳು ತನ್ನ ತಂದೆಯ ನಿಜವಾದ ಗುರುತನ್ನು ಬಹಿರಂಗಪಡಿಸಿದಳು.
‘ನೀವು ಮದುವೆಯಾಗುತ್ತಿರುವುದು ನನ್ನ ಅಪ್ಪನನ್ನು. ಆತ 2 ಮಕ್ಕಳ ತಂದೆ’ ಎಂದು ಆಕೆ ಹೇಳಿದಾಗ ವಧುವಿನ ಮನೆಯವರು ನಂಬಲಿಲ್ಲ. ಕೊನೆಗೆ ಆ ಹುಡುಗಿ ತನ್ನ ತಂದೆಯ ಮೊದಲ ಮದುವೆಯ ದಾಖಲೆಗಳನ್ನು ನೀಡಿದ ಬಳಿಕ ವಧುವಿನ ಮನೆಯವರಿಗೆ ಶಾಕ್ ಆಗಿತ್ತು. ತಕ್ಷಣ ವಧುವಿನ ಕುಟುಂಬಸ್ಥರು ಮದುವೆಯ ಆಚರಣೆಗಳನ್ನು ನಿಲ್ಲಿಸಿ ಪೆÇಲೀಸರಿಗೆ ವಿಷಯ ತಿಳಿಸಿದರು. ನಂತರ ಗಣ್ಯರ ಸಮ್ಮುಖದಲ್ಲಿ ತುರ್ತು ಪಂಚಾಯತ್ ಕರೆಯಲಾಯಿತು.
ಆರೋಪಿ ತಂದೆಯ ಈ ಅನೈತಿಕ ಕೃತ್ಯದ ವಿರುದ್ಧ ಪಂಚಾಯತ್ ಬಲವಾದ ನಿಲುವನ್ನು ತೆಗೆದುಕೊಂಡಿತು. ಮದುವೆಯಾದರೂ ಮತ್ತೊಂದು ಮದುವೆಗೆ ರೆಡಿಯಾಗಿ ವಧುವಿನ ಕುಟುಂಬವನ್ನು ಅವಮಾನಿಸಿದ್ದಕ್ಕಾಗಿ ಮತ್ತು ಮದುವೆಯ ಸಿದ್ಧತೆಗಳ ಸಮಯದಲ್ಲಿ ಉಂಟಾದ ಆರ್ಥಿಕ ನಷ್ಟವನ್ನು ಸರಿದೂಗಿಸಲು ಪಂಚಾಯತ್ ವರನಿಗೆ 5.20 ಲಕ್ಷ ರೂ. ದಂಡ ವಿಧಿಸಿದೆ.
