HomeFresh Newsಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026' ಟೂರ್ನಿ:ಕಮಾಲಿ ಮೂರ್ತಿಗೆ ಡಬಲ್ ಮುಕುಟ

ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026′ ಟೂರ್ನಿ:ಕಮಾಲಿ ಮೂರ್ತಿಗೆ ಡಬಲ್ ಮುಕುಟ

ಮಂಗಳೂರಿನ ಕಡಲತೀರದಲ್ಲಿ ಕಳೆದ ಕೆಲವು ದಿನಗಳಿಂದ ಧಗಧಗಿಸುತ್ತಿದ್ದ ಅಲೆಗಳ ಮೇಲಿನ ಸಾಹಸಕ್ಕೆ ಭಾನುವಾರ ತೆರೆ ಬಿದ್ದಿದೆ. ಏಳನೇ ಆವೃತ್ತಿಯ ‘NMPA ಇಂಡಿಯನ್ ಓಪನ್ ಆಫ್ ಸರ್ಫಿಂಗ್ 2026’ ಟೂರ್ನಿಯಲ್ಲಿ ತಮಿಳುನಾಡಿನ ಸರ್ಫರ್‌ಗಳು ಅದ್ಭುತ ಪ್ರದರ್ಶನ ನೀಡಿ ಪದಕ ಬೇಟೆಯಾಡಿದ್ದಾರೆ. ತಮಿಳುನಾಡಿನ ಹದಿಹರೆಯದ ಪ್ರತಿಭೆ ಕಮಾಲಿ ಮೂರ್ತಿ ಡಬಲ್ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಕರ್ನಾಟಕದ ಪ್ರದೀಪ್ ಪೂಜಾರ್ ಸ್ಥಳೀಯ ಅಭಿಮಾನಿಗಳಿಗೆ ಗೆಲುವಿನ ಸಿಹಿ ನೀಡಿದ್ದಾರೆ.

ಮಂತ್ರ ಸರ್ಫ್ ಕ್ಲಬ್ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಆಯೋಜಿಸಿದ್ದ, ನ್ಯೂ ಮಂಗಳೂರು ಪೋರ್ಟ್ ಅಥಾರಿಟಿ (NMPA) ಪ್ರಾಯೋಜಕತ್ವದ ದೇಶದ ಪ್ರತಿಷ್ಠಿತ ಸರ್ಫಿಂಗ್ ಟೂರ್ನಿ ಮಂಗಳೂರಿನಲ್ಲಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮುಂಬರುವ ಐಚಿ-ನಗೋಯಾ 2026 ಏಷ್ಯನ್ ಗೇಮ್ಸ್‌ನ ಭಾರತೀಯ ತಂಡದ ಆಯ್ಕೆಗೆ ಈ ಟೂರ್ನಿ ಅತ್ಯಂತ ನಿರ್ಣಾಯಕವಾಗಿತ್ತು.

ಇಡೀ ಟೂರ್ನಿಯಲ್ಲಿ ತಮಿಳುನಾಡಿನ ಕಮಾಲಿ ಮೂರ್ತಿ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಮಹಿಳೆಯರ ಓಪನ್ ವಿಭಾಗದಲ್ಲಿ 13.17 ಅಂಕ ಗಳಿಸುವ ಮೂಲಕ ಕಮಾಲಿ ತಮ್ಮ ಪ್ರಶಸ್ತಿಯನ್ನು ಯಶಸ್ವಿಯಾಗಿ ಸಮರ್ಥಿಸಿಕೊಂಡರು. ಗೋವಾದ ಶುಗರ್ ಶಾಂತಿ ಬನಾರಸೆ (11.73 ಅಂಕ) ದ್ವಿತೀಯ ಸ್ಥಾನ ಪಡೆದರೆ, ಸೃಷ್ಟಿ ಸೆಲ್ವಂ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು. ಕಮಾಲಿ ಕೇವಲ ಓಪನ್ ವಿಭಾಗ ಮಾತ್ರವಲ್ಲದೆ, ಜೂನಿಯರ್ಸ್ U-18 ಬಾಲಕಿಯರ ವಿಭಾಗದಲ್ಲೂ 14.83 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದು ಭರ್ಜರಿ ‘ಡಬಲ್ ಮುಕುಟ’ ಧರಿಸಿದರು. ಈ ವಿಭಾಗದಲ್ಲಿ ಕರ್ನಾಟಕದ ಸಾನ್ವಿ ಹೆಗ್ಡೆ ದ್ವಿತೀಯ ಸ್ಥಾನ ಗಳಿಸಿ ರಾಜ್ಯಕ್ಕೆ ಕೀರ್ತಿ ತಂದರು.

ಇತ್ತ ಪುರುಷರ ಓಪನ್ ವಿಭಾಗದಲ್ಲಿ ತಮಿಳುನಾಡಿನ ಕಿಶೋರ್ ಕುಮಾರ್ 15.20 ಅಂಕಗಳೊಂದಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದರು. ಕೇರಳದ ರಮೇಶ್ ಬುಡಿಹಾಳ್ ದ್ವಿತೀಯ ಸ್ಥಾನ ಪಡೆದರು. ಇನ್ನು ಸ್ಥಳೀಯ ಅಭಿಮಾನಿಗಳಿಗೆ ಅತೀವ ಸಂತಸ ತಂದಿದ್ದು ಕರ್ನಾಟಕದ ಪ್ರದೀಪ್ ಪೂಜಾರ್ ಅವರ ಸಾಧನೆ. U-18 ಬಾಲಕರ ವಿಭಾಗದಲ್ಲಿ ಪ್ರದೀಪ್ ಪೂಜಾರ್ 12.17 ಅಂಕಗಳೊಂದಿಗೆ ಅದ್ಭುತ ಪ್ರದರ್ಶನ ನೀಡಿ, ಆತಿಥೇಯ ಕರ್ನಾಟಕಕ್ಕೆ ಏಕೈಕ ಚಿನ್ನದ ಪದಕವನ್ನು ತಂದುಕೊಟ್ಟರು.

ಇದೇ ಮೊದಲ ಬಾರಿಗೆ ಪರಿಚಯಿಸಲಾದ U-14 ಗ್ರೋಮ್ಸ್ ವಿಭಾಗದಲ್ಲೂ ಯುವ ಪ್ರತಿಭೆಗಳು ಮಿಂಚಿದರು. ಬಾಲಕರ ವಿಭಾಗದಲ್ಲಿ ಹರೀಶ್ ಪಿ ಹಾಗೂ ಬಾಲಕಿಯರ ವಿಭಾಗದಲ್ಲಿ ಧಮಯಂತಿ ಶ್ರೀರಾಮ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ವಿಜೇತರಿಗೆ ನಗದು ಬಹುಮಾನ, ಪ್ರಮಾಣಪತ್ರ ಹಾಗೂ ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments