HomeFresh Newsಪಡುಬಿದ್ರಿ ಸಹಕಾರಿ ಸಂಘದಿಂದ 194 ರೈತರಿಗೆ ತಲಾ ₹3 ಸಾವಿರ ಕೃಷಿ ಪ್ರೋತ್ಸಾಹ ಧನ ವಿತರಣೆ

ಪಡುಬಿದ್ರಿ ಸಹಕಾರಿ ಸಂಘದಿಂದ 194 ರೈತರಿಗೆ ತಲಾ ₹3 ಸಾವಿರ ಕೃಷಿ ಪ್ರೋತ್ಸಾಹ ಧನ ವಿತರಣೆ

ಪಡುಬಿದ್ರಿ: ಜನಸಾಮಾನ್ಯರ ಬ್ಯಾಂಕ್‌ಗಳಾಗಿ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಜನರ ಮನೆ ಬಾಗಿಲಿಗೇ ಸೇವೆಗಳನ್ನು ತಲುಪಿಸುತ್ತಿವೆ. ಬದಲಾದ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯಲ್ಲಿ ಸಮಾನತೆಯ ಬದುಕು ಕಟ್ಟಿಕೊಳ್ಳಲು ಸಹಕಾರದ ತತ್ವಗಳು ಅತ್ಯಗತ್ಯ. ಸಹಕಾರದ ಆಶಯಕ್ಕೆ ಅನುಗುಣವಾಗಿ ನಮ್ಮ ಜಿಲ್ಲೆಯಲ್ಲಿ ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಅವರು ನ. 18ರಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ 73ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ರೈತರಿಗೆ ಕೃಷಿ ಪ್ರೋತ್ಸಾಹ ಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.


ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಸಹಕಾರ ಮತ್ತು ಸರ್ಕಾರಗಳು ಪರಸ್ಪರ ಕೈಜೋಡಿಸಿ ಮುನ್ನಡೆದಾಗ ಮಾತ್ರ ಸಮಗ್ರ ಪ್ರಗತಿ ಸಾಧ್ಯ. ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನದಿಂದ ಸ್ಥಳೀಯವಾಗಿ ಬ್ಯಾಂಕಿಂಗ್ ಸೇವೆಗಳ ಲಭ್ಯತೆಯಲ್ಲಿ ಬದಲಾವಣೆಗಳಾಗಿದ್ದು, ಇಂತಹ ಸಂದರ್ಭದಲ್ಲಿ ಸಹಕಾರಿ ಸಂಸ್ಥೆಗಳು ಜನರಿಗೆ ಇನ್ನಷ್ಟು ಹತ್ತಿರವಾಗಿವೆ. ಕೃಷಿಯನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿ ಸಂಸ್ಥೆಗಳು ರೈತರ ಬೆನ್ನೆಲುಬಾಗಿ ನಿಂತಿವೆ ಎಂದರು.
ಶಿಕ್ಷಣ ತಜ್ಞ ಕೊಕ್ಕರ್ಣೆ ಸುರೇಂದ್ರನಾಥ್ ದಿಕ್ಸೂಚಿ ಭಾಷಣ ಮಾಡಿ, ಸಾರ್ವಜನಿಕರ ಪಾಲುದಾರಿಕೆ, ಪರಸ್ಪರ ಸಹಕಾರ ಹಾಗೂ ಬಂಡವಾಳದ ಹಂಚಿಕೆಯ ಮೂಲಕ ಬೆಳೆಯುವ ಸಂಸ್ಥೆಗಳೇ ಸಹಕಾರಿ ಸಂಸ್ಥೆಗಳಾಗಿವೆ. ಪರಸ್ಪರ ಬೆಳವಣಿಗೆಗೆ ಸಹಕಾರ ತತ್ವಗಳು ಪೂರಕವಾಗಿವೆ ಎಂದರು.
ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ.ಆರ್. ಮಾತನಾಡಿದರು. ಕುಂದಾಪುರ ಸಹಾಯಕ ನಿಬಂಧಕ ಜೆ. ಸುಧೀರ್ ಕುಮಾರ್, ಪಡುಬಿದ್ರಿ ಸೊಸೈಟಿಯ ಉಪಾಧ್ಯಕ್ಷ ಗುರುರಾಜ ಪೂಜಾರಿ, ಹಿರಿಯ ಸಹಕಾರಿ ಹಾಗೂ ಡಿಸಿಸಿ ನಿರ್ದೇಶಕ ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಸಹಕಾರಿ ಯೂನಿಯನ್ ನಿರ್ದೇಶಕರಾದ ಗಂಗಾಧರ ಶೆಟ್ಟಿ, ಅನಿಲ್ ಕುಮಾರ್, ಸುರೇಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ 2026ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿಗೆ ಭಾಜನರಾದ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್, ಸತೀಶ್ ಕುಂದರ್ ಮಲ್ಪೆ ಹಾಗೂ ಗಿರೀಶ್ ವಿ. ಸುವರ್ಣ ಪಿತ್ರೋಡಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಸತೀಶ್ ಕುಂದರ್ ಮಲ್ಪೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ವೈದ್ಯಕೀಯ ನೆರವು ವಿತರಿಸಲಾಯಿತು. ದೈನಿಕ ಠೇವಣಿ ಸಂಗ್ರಹಕಾರರಿಗೆ ಬ್ಯಾಗ್ ವಿತರಣೆ ಮಾಡಲಾಯಿತು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿಯ ವ್ಯಾಪ್ತಿಯ 194 ರೈತರಿಗೆ ತಲಾ ₹3,000ರಂತೆ ಒಟ್ಟು ₹5.82 ಲಕ್ಷ ಕೃಷಿ ಪ್ರೋತ್ಸಾಹ ಧನ ವಿತರಿಸಲಾಯಿತು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪಡುಬಿದ್ರಿ ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಸಿಇಒ ಅನುಷಾ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಷ್ಮಿತಾ ಪಿ.ಎಚ್. ವಂದಿಸಿದರು.

Swarna jewellery - 4
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments