ದಿನಾಂಕ 24-05-2026 ರಂದು ಹೆಬ್ರಿ ತಾಲೂಕು ಅನಂತನಗರ ಎಸ್ ಆರ್ ಎಸ್ ಶಾಲೆಯ ಬಳಿಯ ಕೀರ್ತನ ಪ್ರಭು ಎಂಬವರ ಮನೆಯಲ್ಲಿ ಜನರು ನಿದ್ರೆ ಮಾಡಿಕೊಂಡಿದ್ದ ಸಂದರ್ಭದಲ್ಲಿ ಯಾರೋ ಅಪರಿಚಿತರು ಮನೆಯ ಹಿಂಭಾಗದ ಕಿಟಕಿಯ ಚಿಲಕದ ಕೊಂಡಿಯನ್ನು ಮೀಟಿ ತೆಗೆದು ಮನೆಯ ಒಳಗೆ ಪ್ರವೇಶಿಸಿ ಗಾಡ್ರೇಜ್ ಕಪಾಟಿನ ಬೀಗವನ್ನು ಒಡೆದು ಲಾಕರ್ ನಲ್ಲಿ ಇದ್ದ ಸುಮಾರು 49,42,000/- ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಸುಮಾರು 3,95,000/- ರೂಪಾಯಿ ಮೌಲ್ಯದ ಬೆಳ್ಳಿ ಆಭರಣಗಳನ್ನು ಮತ್ತು ಸುಮಾರು 6,60,000/- ರೂಪಾಯಿ ಮೌಲ್ಯದ ಚಿನ್ನದ ಹೊದಿಕೆ ಇರುವ ವಜ್ರದ ಆಭರಣಗಳನ್ನು ಒಟ್ಟು ಸುಮಾರು ರೂಪಾಯಿ 59,77,000/- ಮೌಲ್ಯದ ಸ್ವತ್ತುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.

ಸದರಿ ಪ್ರಕರಣದ ಪತ್ತೆ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಹರಿರಾಮ ಶಂಕರ್ ಐಪಿಎಸ್ ರವರ ಆದೇಶದಂತೆ ಉಡುಪಿ ಜಿಲ್ಲಾ ಪೊಲೀಸ್ ಹೆಚ್ಚುವರಿ ಪೊಲೀಸ್ ಅಧಿಕಾರಿ ಶ್ರೀ ಸುಧಾಕರ ಎಸ್ ನಾಯಕ್ ಅವರ ನಿರ್ದೇಶನದಂತೆ ಕಾರ್ಕಳ ಉಪ ವಿಭಾಗದ ಡಿವೈಎಸ್ಪಿ ಶ್ರೀ ಎಸ್ ವಿಜಯಪ್ರಸಾದ್ ರವರ ಮಾರ್ಗದರ್ಶನದಲ್ಲಿ ಕಾರ್ಕಳ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ ಮಂಜಪ್ಪ ಡಿ ಆರ್ ಮತ್ತು ಕಾರ್ಕಳ ವೃತ್ತ ಪ್ರಭಾರ ಸಿಪಿಐ ಶ್ರೀ ರಾಘವೇಂದ್ರ ರವರು ಹೆಬ್ರಿ ಪೊಲೀಸ್ ಠಾಣಾ ಪಿಎಸ್ಐ ರವರಾದ ರವಿ ಬಿ ಕೆ ಮತ್ತು ಚಂದ್ರ ಏ ಕೆ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಪಿಎಸ್ಐ ಪ್ರಸನ್ನ ಎಂ ಎಸ್, ಶಿರ್ವ ಪೊಲೀಸ್ ಠಾಣಾ ಪಿಎಸ್ಐ ಮಂಜುನಾಥ ಮರಬದ, ಪಡುಬಿದ್ರಿ ಪೊಲೀಸ್ ಠಾಣಾ ಎಎಸ್ಐ ರಾಜೇಶ್ ಪಿ ರವರನ್ನು ಒಳಗೊಂಡ ವಿಶೇಷ ಅಪರಾಧ ಪತ್ತೆ ದಳವನ್ನು ರಚಿಸಿ ತಮಿಳುನಾಡು ಚೆನ್ನೈ ಪೆರೂರು ಮೂಲದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಚರ್ಕಳ ಮುಟ್ಟತ್ತೋಡಿ ಚೆರಿಯಾಲಂಬಾಡಿ ವಾಸಿ ಕಾಸರಗೋಡು ರಮ್ದೀನ್ ಸಲೀಂ, ಮೂಡಬಿದ್ರೆಯ ಮಿಜಾರು ಗ್ರಾಮದ ಹರೀಶ್ ಶೆಟ್ಟಿ ಮತ್ತು ಕಾಸರಗೋಡು ಜಿಲ್ಲೆಯ ನೆಕ್ರಜೆ ಗ್ರಾಮದ ನೆಲ್ಲಿಕಟ್ಟೆ ಚೆನ್ನಡ್ಕ ನಿವಾಸಿ ಮಹಮ್ಮದ್ ಸಫ್ವಾನ್ ಎಂಬವರನ್ನು ದಸ್ತಗಿರಿ ಮಾಡಿ ಕಳವಾದ 37,87,800/- ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಮತ್ತು ಬೆಳ್ಳಿ ಆಭರಣಗಳನ್ನು ಹಾಗೂ 4 ಲಕ್ಷ ರೂಪಾಯಿ ಮೌಲ್ಯದ ಮಾರುತಿ ಆಲ್ಟೋ ಕಾರನ್ನು ವಶಪಡಿಸಿಕೊಂಡಿರುತ್ತಾರೆ. ಇನ್ನೊಬ್ಬ ಆರೋಪಿಯ ದಸ್ತಗಿರಿಗೆ ಬಾಕಿ ಇದ್ದು ಉಳಿದ ಚಿನ್ನಾಭರಣಗಳ ಸ್ವಾಧೀನಕ್ಕೆ ಬಾಕಿ ಇರುತ್ತದೆ.

ಸದರಿ ಪ್ರಕರಣದಲ್ಲಿ ಆರೋಪಿ ದಸ್ತಗಿರಿ ಮತ್ತು ಸ್ವತ್ತು ಸ್ವಾದಿನತಾ ಕಾರ್ಯದಲ್ಲಿ ಹೆಬ್ರಿ ಪೊಲೀಸ್ ಠಾಣಾ ಹೆಚ್ ಸಿ ರಾಜಕುಮಾರ್, ಅವಿನಾಶ್, ಪಿ ಸಿ ಕಿರಣ, ಅಜೆಕಾರು ಪೊಲೀಸ್ ಠಾಣಾ ಹೆಚ್ ಸಿ ಸತೀಶ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ಪಿ ಸಿ ಸಿದ್ದರಾಯಪ್ಪ, ಸಂತೋಷ , ತನಿಖಾ ಸಹಾಯಕರಾಗಿ ಹೆಬ್ರಿ ಪೊಲೀಸ್ ಠಾಣಾ ಹೆಚ್ ಸಿ ರಘು ಮೊಘವೀರ, ಕಾರ್ಕಳ ವೃತ್ತ ನಿರೀಕ್ಷಕರ ಕಚೇರಿಯ ಪಿಸಿ ಶಶಿಕುಮಾರ್, ಕಾರ್ಕಳ ಡಿವೈಎಸ್ಪಿ ಕಚೇರಿಯ ಸಿಬ್ಬಂದಿ ಶಿವಾನಂದ ಪೂಜಾರಿ ಭಾಗವಹಿಸಿರುತ್ತಾರೆ.
ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯ ಸಿಡಿಆರ್ ವಿಭಾಗದ ಸಿಬ್ಬಂದಿ ದಿನೇಶ್ ಮತ್ತು ನಿತಿನ್, ಜಿಲ್ಲಾ ಬೆರಳು ಮುದ್ರೆ ಘಟಕದ ತಜ್ಞೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀಮತಿ ಎಲ್ ಮೋಹನ ಕುಮಾರಿ ಹಾಗೂ ಅವರ ಸಿಬ್ಬಂದಿರವರು ಸಹಕರಿಸುತ್ತಾರೆ.

ರಬ್ದಿನ್ ಸಲೀಂ 2013ನೇ ಇಸವಿಯಲ್ಲಿ ಉತ್ತರ ಕನ್ನಡ ಜಿಲ್ಲೆ ಅನುಕೂಲ ವ್ಯಾಪ್ತಿಯಲ್ಲಿ ನಡೆದ ಆರ್ ಎನ್ ನಾಯಕ್ ಕೊಲೆ ಕೇಸ್ ಪ್ರಕರಣದಲ್ಲಿ ಆರೋಪಿಯಾಗಿದ್ದು ಅಲ್ಲದೆ ಮಣಿಪಾಲ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಕಳವು ಪ್ರಕರಣದ ಆರೋಪಿ ಆಗಿರುತ್ತಾನೆ. ಹರೀಶ್ ಶೆಟ್ಟಿ ಮೇಲೆ ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಯತ್ನ ಹಾಗು ಮಾದಕ ದ್ರವ್ಯ ಸೇವನೆ ಪ್ರಕರಣ ಮತ್ತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.

