ಪುತ್ತೂರು: ಈ ಬಾರಿಯ ಜಗತ್ಪ್ರಸಿದ್ದ ಮೈಸೂರು ದಸರಾದಲ್ಲಿ ಕಂಬಳ ನಡೆಯಲಿದ್ದು, ಶುಕ್ರವಾರ ಮೈಸೂರಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರಥಮ ಸಭೆಯಲ್ಲಿ ಕಂಬಳ ದಿನಾಂಕ ಮತ್ತು ಸ್ಥಳ ನಿಗಧಿಮಾಡಲಾಗಿದೆ ಎಂದು ಕಂಬಳದ ರುವಾರಿ ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಅಕ್ಟೋಬರ್ ತಿಂಗಳ ೧೮ ಮತ್ತು ೧೯ ರಂದು ಕಂಬಳ ನಡೆಯಲಿದೆ. ಬಾನುವಾರ ಮತ್ತು ಸೋಮವಾರ ಎರಡು ದಿನಗಳಲ್ಲಿ ಕಂಬಳ ನಡೆಯಲಿದೆ ಎಂದು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಎಲ್ಲಿ ಕಂಬಳ?
ಮೈಸೂರಿನಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಬಳಿ ಇರುವ ಸುಮಾರು ೨೦ ಎಕ್ರೆ ಜಾಗದಲ್ಲಿ ಕಂಬಳ ನಡೆಯಲಿದೆ. ಎರಡು ಸ್ಥಳಗಳನ್ನು ಸೂಚಿಸಲಾಗಿದ್ದು ಈ ಪೈಕಿ ೨೦ ಎಕ್ರೆ ಇರುವ ಜಾಗವೇ ಕಂಬಳಕ್ಕೆ ಸೂಕ್ತ ಎಂಬ ಅಂತಿಮ ನಿರ್ಧಾರಕ್ಕೆ ಬರಲಾಯಿತು.
ಎಷ್ಟು ಜೋಡಿ ಕೋಣಗಳು ಭಾಗವಹಿಸಲಿದೆ?
ಕಂಬಳದಲ್ಲಿ ಸುಮಾರು ೧೫೦ ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆ ಇದೆ. ಜುಲೈ ತಿಂಗಳ ೧೫ ರೊಳಗಾಗಿ ಕಂಬಳಕ್ಕೆ ಭೂಮಿ ಪೂಜೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸೀಎಂ ಸಭೆಯಲ್ಲಿ ಅಂತಿಮ ನಿರ್ಧಾರ: ಅಶೋಕ್ ರೈ
ಮೈಸೂರು ದಸರಾಗೆ ನಡೆಯಲಿರುವ ಕಂಬಳದ ಮೊದಲ ಸಭೆ ಶುಕ್ರವಾರ ನಡೆದಿದೆ. ಈ ಸಭೆಯಲ್ಲಿ ಕಂಬಳ ಸಮಿತಿ ಪ್ರಮುಖರು, ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಕೆಲವೊಂದು ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ದಿನಾಂಕ ಮ್ತತು ಸ್ಥಳವನ್ನು ಮಾತ್ರ ಪ್ರಥಮ ಸಭೆಯಲ್ಲಿ ಅಂತಿಮ ಮಾಡಲಾಗಿದೆ. ಉಳಿದಂತೆ ಎಲ್ಲಾ ವಿಚಾರಗಳು ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರವರ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ಕಂಬಳದ ರೂಪುರೇಶೆಗಳ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.
ಸಭೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ, ಮೈಸೂರು ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಯೂಕೇಶ್‌ಕುಮಾರ್, ಮೈಸೂರು ಡಿಸಿಪಿ ಡಾ.ಹರ್ಷಪ್ರಿಯಂವಧ, ಕಂಬಳದ ಸಂಚಾಲಕರಾದ ರಾಜೇಶ್ ಶೆಟ್ಟಿ ಎಡ್ತೂರು,ಗುಣಪಾಲ್ ಕಡಂಬ, ಮುರಳೀಧರ್ ರೈ ಮಠಂತಬೆಟ್ಟು,ಕರಾವಳಿ ಎಸೋಸಿಯೇಶನ್ ಅಧ್ಯಕ್ಷ ಗ್ರಾಸಿಯನ್ ರೋಡ್ರಿಗಸ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

