ಪೊಲೀಸರ ಕೈಯಿಂದ ತಪ್ಪಿಸಿಕೊಂಡ ಕುಖ್ಯಾತ ಕೈದಿ ಮಂಗಳೂರು ಪೊಲೀಸರ ಕೈಯಿಂದ ಹ್ಯಾಂಡ್ಕಫ್ ಸಮೇತ ಪರಾರಿಯಾದ ಖತರ್ನಾಕ್ ಸರಗಳ್ಳ ಮಂಗಳೂರು, ಜೂನ್ 27: ಮಂಗಳೂರಿನಲ್ಲಿ ಸಿನಿಮೀಯ ರೀತಿಯಲ್ಲಿ ಪೊಲೀಸರ ಕೈಯಿಂದ ಹ್ಯಾಂಡ್ಕಫ್ ಸಮೇತ ಖತರ್ನಾಕ್ ಸರಗಳ್ಳನೊಬ್ಬ ತಪ್ಪಿಸಿಕೊಂಡಿರುವ ಘಟನೆ ರೋಸಾರಿಯೋ ಚರ್ಚ್ ರಸ್ತೆಯಲ್ಲಿ ನಡೆದಿದ್ದು, ಆರೋಪಿಗಾಗಿ ನಗರಾದ್ಯಂತ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಪಾಂಡೇಶ್ವರ ಪೊಲೀಸರ ವಶದಲ್ಲಿದ್ದ ಬಾಗಲಕೋಟೆ ಮೂಲದ ಅಲ್ತಾಫ್ ಹುಸೇನ್ ಎಂಬಾತನೇ ಪೊಲೀಸರನ್ನು ತಳ್ಳಿ ಪರಾರಿಯಾದ ಆರೋಪಿಯಾಗಿದ್ದಾನೆ. ಇತ್ತೀಚೆಗೆ ಜಪ್ಪಿನಮೊಗರಿನಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರಿಗೆ ಉತ್ತರ ಪ್ರದೇಶ ಮೂಲದ ಮಹಮ್ಮದ್ ಸಿದ್ದಿಕ್, ರವಿ ಬೌರ್ ಹಾಗೂ ಬಾಗಲಕೋಟೆಯ ಅಲ್ತಾಫ್ ಹುಸೇನ್ ಗ್ಯಾಂಗ್ ಮೇಲೆ ಬಲವಾದ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಮಂಗಳೂರು, ಹೈದರಾಬಾದ್, ಬಾಗಲಕೋಟೆ, ಗದಗ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ವಾಹನ ಕಳ್ಳತನ, ಸರಗಳ್ಳತನ ಹಾಗೂ ಸುಲಿಗೆ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈ ಅಂತರರಾಜ್ಯ ಗ್ಯಾಂಗ್, ಕೃತ್ಯ ಎಸಗಿದ ಬಳಿಕ ಮಂಗಳೂರು ನಗರ ಬಿಟ್ಟು ಪರಾರಿಯಾಗಿತ್ತು. ಆದರೆ, ಈ ಗ್ಯಾಂಗ್ ಮತ್ತೆ ಮಂಗಳೂರಿನ ಮೀನುಗಾರಿಕಾ ಬಂದರು ಪ್ರದೇಶಕ್ಕೆ ಬಂದಿರುವ ಖಚಿತ ಮಾಹಿತಿ ಲಭಿಸಿದ ತಕ್ಷಣ ಕಾರ್ಯಪ್ರವೃತ್ತರಾದ ಪಾಂಡೇಶ್ವರ ಪೊಲೀಸರು ಮೂವರನ್ನೂ ಯಶಸ್ವಿಯಾಗಿ ಬಂಧಿಸಿದ್ದರು. ಆದರೆ, ಬಂಧಿತ ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆತರುತಿದ್ದ ಸಂದರ್ಭದಲ್ಲಿ ರೋಸಾರಿಯೋ ಚರ್ಚ್ ರಸ್ತೆ ಬಳಿ ಅಲ್ತಾಫ್ ಹುಸೇನ್ ಏಕಾಏಕಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ, ಕೈಗೆ ಹ್ಯಾಂಡ್ಕಫ್ ಇದ್ದ ಸ್ಥಿತಿಯಲ್ಲೇ ಓಡಿ ಪರಾರಿಯಾಗಿದ್ದಾನೆ. ಅಲ್ತಾಫ್ ಓಡುತ್ತಿದ್ದಂತೆ ಆತನ ಸಹಚರರಾದ ಮಹಮ್ಮದ್ ಸಿದ್ದಿಕ್ ಹಾಗೂ ರವಿ ಬೌರ್ ಕೂಡ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ, ಅಲರ್ಟ್ ಆದ ಪೊಲೀಸ್ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ಅವರಿಬ್ಬರನ್ನೂ ಧಾವಿಸಿ ಹಿಡಿದು ಮತ್ತೆ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಅಲ್ತಾಫ್ ಹ್ಯಾಂಡ್ಕಫ್ ಸಮೇತ ಓಡಿ ಹೋಗುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ನಗರದ ಪ್ರಮುಖ ರಸ್ತೆಗಳು ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ತಪಾಸಣೆ ಚುರುಕುಗೊಳಿಸಿದ್ದಾರೆ. ಸಾರ್ವಜನಿಕರು ಈ ಪರಾರಿಯಾದ ಆರೋಪಿಯ ಬಗ್ಗೆ ಯಾವುದೇ ಮಾಹಿತಿ ಇದ್ದಲ್ಲಿ ತಕ್ಷಣವೇ ಸಮೀಪದ ಪೊಲೀಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ನೀಡಿ ಸಹಕರಿಸಬೇಕಾಗಿ ಮಂಗಳೂರು ನಗರ ಪೊಲೀಸರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


