ಕಟಪಾಡಿ:ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಟ್ಟು ಬೀಚ್‌ನಲ್ಲಿ ತೀವ್ರ ಪ್ರಮಾಣದ ಕಡಲ್ಗೊರೆತ ಉಂಟಾಗಿದ್ದು, ಕಡಲ ದಂಡೆಯ ಮರಳು ನಿರಂತರವಾಗಿ ಸಮುದ್ರದ ಪಾಲಾಗುತ್ತಿದೆ. ದಿನದಿಂದ ದಿನಕ್ಕೆ ಕಡಲ್ಕೊರೆತ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಹಾಗೂ ಮೀನುಗಾರರಲ್ಲಿ ಆತಂಕ ಮನೆ ಮಾಡಿದೆ.

ಕಡಲ್ಕೊರೆತದ ಪರಿಣಾಮ ಕಡಲಕಿನಾರೆಯ ಮೀನುಗಾರಿಕಾ ರಸ್ತೆಗೂ ಅಪಾಯ ಎದುರಾಗುವ ಭೀತಿ ಎದುರಾಗಿದೆ. ಈಗಾಗಲೇ ಸುಮಾರು ನೂರಾರು ಮೀಟರ್‌ಗಳಷ್ಟು ಕಡಲತಡಿಯ ಬಂಡೆಕಲ್ಲು ಸಮುದ್ರದ ಪಾಲಾಗಿದ್ದು, ಇನ್ನೂ ಹೆಚ್ಚಿನ ಪ್ರದೇಶ ಕೊರೆತಕ್ಕೆ ಒಳಗಾಗುವ ಆತಂಕ ಎದುರಾಗಿದೆ. ಮಳೆ ಹಾಗೂ ಪ್ರಕ್ಷುಬ್ಧ ಅಲೆಗಳ ಅಬ್ಬರದಿಂದ ಮಟ್ಟು ಕರಾವಳಿ ತೀರದಲ್ಲಿ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಸಮುದ್ರದ ಅಲೆಗಳು ವೇಗವಾಗಿ ತೀರದ ಮರಳು ಕೊಚ್ಚಿಕೊಂಡು ಹೋಗುತ್ತಿವೆ.


