HomeFresh Newsರಾಮಮಂದಿರದ ಹುಂಡಿ ಕಳವು ಪ್ರಕರಣದ ಐಟಿ, ಇಡಿ, ಸಿಬಿಐ ಮೌನ - ವಿನಯ ಕುಮಾರ್ ಸೊರಕೆ

ರಾಮಮಂದಿರದ ಹುಂಡಿ ಕಳವು ಪ್ರಕರಣದ ಐಟಿ, ಇಡಿ, ಸಿಬಿಐ ಮೌನ – ವಿನಯ ಕುಮಾರ್ ಸೊರಕೆ

ಮಂಗಳೂರು: ರಾಮಮಂದಿರದ ಹುಂಡಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಆರೆಸ್ಸೆಸ್, ವಿಎಚ್ ಪಿ ಮತ್ತು ಬಿಜೆಪಿಯವರು ಕೋಟ್ಯಂತರ ರಾಮ ಭಕ್ತರ ನಂಬಿಕೆಗೆ ಆಘಾತವನ್ನುಂಟು ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಹೇಳಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ಆಯೋಜಿಸಿದ ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಪ್ರಕರಣದ ಬಗ್ಗೆ ಐಟಿ, ಇಡಿ, ಸಿಬಿಐ ಮೌನವಾಗಿವೆ. ತಾನೋರ್ವ ಚೌಕಿದಾರ್ ಎನ್ನುವ ಪ್ರಧಾನಿ ಮೋದಿಯವರು ನೇಮಿಸಿದ ಉಪಚೌಕಿದಾರ ಟ್ರಸ್ಟಿಗಳಿಂದಲೇ ಕಳವು ನಡೆದಿದೆ. ರಾಮಮಂದಿರದ ಪ್ರಕರಣವನ್ನು ಪ್ರಧಾನಿಯವರು ಮನ್ ಕಿ ಬಾತ್ ನಲ್ಲಿಯೂ ಉಲ್ಲೇಖಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಪಕ್ಷದ ಸಂಘಟನಾ ಚಟುವಟಿಕೆಗಳ ದೃಷ್ಟಿಯಿಂದ ಪ್ರಚಾರ ಸಮಿತಿಯು ಬೂತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಅಗತ್ಯವಿದ್ದು, ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು, ಐದು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಮನೆಮನೆಗೆ ತಲುಪಿಸುವ ನಿಟ್ಟಿನಲ್ಲಿ ಜಿಲ್ಲಾ ಪ್ರಚಾರ ಸಮಿತಿಯ ಸದಸ್ಯರು ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.

ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಜಾಗರೂಕತೆ ಮತ್ತು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಅರ್ಹ ಮತದಾರರ ಹೆಸರುಗಳು ಕೈಬಿಡದಂತೆ ನಿಗಾ ವಹಿಸಬೇಕು ಎಂದರು.

ಕೆಪಿಸಿಸಿ ಪ್ರಚಾರ ಸಮಿತಿ ಮುಖ್ಯ ಸಂಯೋಜಕ ಸುಧೀರ್ ಕುಮಾರ್ ಮರೋಳಿ ಮಾತನಾಡಿ, ಎಸ್‌.ಐ.ಆರ್ ಸಂದರ್ಭದಲ್ಲಿ ರಾಮನ ಹುಂಡಿ ಕದ್ದವರು ಮತದಾರರ ಮತದಾನದ ಹಕ್ಕನ್ನು ಕದಿಯುವ ಸಾಧ್ಯತೆಯಿದ್ದು, ಇದಕ್ಕಾಗಿ ಜಾಗೃತರಾಗಿ ಎನ್ನುವ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದವರು, ಹುಂಡಿ ಕಳವು ಪ್ರಕರಣಕ್ಕೂ ಪ್ರಧಾನಿ ಕಚೇರಿಗೂ ನೇರ ಸಂಬಂಧವಿದೆ. ಟ್ರಸ್ಟ್ ನಲ್ಲಿದ್ದವರೆಲ್ಲರೂ ಆರೆಸ್ಸೆಸ್ ಮತ್ತು ಬಿಜೆಪಿಯ ಪದಾಧಿಕಾರಿಗಳು ಸೇರಿದ್ದಾರೆ. ಈ ಗುಂಪು ದೇವರ ಹಣ, ಬಂಗಾರ, ಬೆಳ್ಳಿ, ನಗದನ್ನು ಢಕಾಯಿತಿ ಮಾಡಿದೆ. ಈ ಬಗ್ಗೆ ಬಿಜೆಪಿ ನಾಯಕರು ಯಾಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದರು.

ದ.ಕ.ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡೇನಿಸ್ ಡಿಸಿಲ್ವಾ ಮಾತನಾಡಿ, ಪಕ್ಷದ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡಿ ಜಿಲ್ಲಾ ಹಾಗೂ ಬ್ಲಾಕ್ ಮಟ್ಟದಲ್ಲಿ ಪ್ರಚಾರ ಸಮಿತಿಗಳನ್ನು ಬಲಿಷ್ಠಗೊಳಿಸಬೇಕು. ಪ್ರತಿಯೊಂದು ಬ್ಲಾಕ್‌ನಲ್ಲಿ ಶೀಘ್ರವಾಗಿ ಪ್ರಚಾರ ಸಮಿತಿಗಳನ್ನು ರಚಿಸಿ, ಬೂತ್ ಮಟ್ಟದವರೆಗೂ ಕಾರ್ಯಕರ್ತರನ್ನು ಸಂಘಟಿಸುವ ಕೆಲಸವನ್ನು ಕೈಗೊಳ್ಳಬೇಕು ಸೂಚನೆ ನೀಡಿದರು.

ಈ ಸಂದರ್ಭ ಪ್ರಚಾರ ಸಮಿತಿಯ ವಿಧಾನಸಭಾ ನೂತನ ಅಧ್ಯಕ್ಷರಾದ ಹೈದರ್ ಕೈರಂಗಳ, ವಸಂತ್ ಬರ್ನಾಡ್, ಸಂತೋಷ್ ಲೂಯಿಸ್ ಡಿಕೋಸ್ಟ, ರಮಾನಂದ ಪೂಜಾರಿ ಹಾಗೂ ಬ್ಲಾಕ್ ಅಧ್ಯಕ್ಷರಾದ ಮಹಮ್ಮದ್ ಮುಸ್ತಫಾ, ಸುರೇಶ್ ದೇವಾಡಿಗ, ಕುಮಾರ್ ಪೂಜಾರಿ, ಯೂಸುಫ್ ಉಳಾಯಿಬೆಟ್ಟು, ಆದರ್ಶ ಶೆಟ್ಟಿ, ಉದಯ್ ಕುಂದರ್, ಆಸೀಫ್ ಅಹ್ಮದ್ ಅವರಿಗೆ ನೇಮಕಾತಿ ಆದೇಶ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಜೆ.ಆರ್.ಲೋಬೊ, ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧ್ಯಕ್ಷೆ ಶಾಲೆಟ್ ಪಿಂಟೊ, ಮೂಡಾ ಅಧ್ಯಕ್ಷ ಸದಾಶಿವ್ ಉಳ್ಳಾಲ್, ದ.ಕ.ಜಿಲ್ಲಾ ಗ್ರಾಮೀಣ ಪ್ರಚಾರ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಲಿ ಪುತ್ತೂರು, ಮಾಜಿ ಮೇಯರಾದ ಶಶಿಧರ್ ಹೆಗ್ಡೆ, ಕೆ.ಭಾಸ್ಕರ್ ಮೊಯ್ಲಿ, ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕರಾದ ಕೆ.ಪಿ ಥಾಮಸ್, ಪದ್ಮಪ್ರಸಾದ್ ಜೈನ್, ಮುಖಂಡರಾದ ಶುಭೋದಯ ಆಳ್ವ, ಕೆ.ಕೆ.ಶಾಹುಲ್ ಹಮೀದ್, ಇಬ್ರಾಹೀಂ ನವಾಝ್, ಲುಕ್ಮಾನ್ ಬಂಟ್ವಾಳ್, ಎಸ್.ಅಪ್ಪಿ, ಕೆ.ಪಿ.ಜಾನಿ ಸುಳ್ಯ ಉಪಸ್ಥಿತರಿದ್ದರು.

ಡಿಸಿಸಿ ಉಪಾಧ್ಯಕ್ಷ ಟಿ.ಕೆ.ಸುಧೀರ್ ಸ್ವಾಗತಿಸಿದರು. ಮಂಗಳೂರು ನಗರ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಉದಯ್ ಕುಂದರ್ ಕಾರ್ಯಕ್ರಮ ನಿರೂಪಿಸಿದರು.

sudha add new -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments