HomeFresh Newsಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಟಿಡೊಂಜಿ ದಿನ ಆಚರಣೆ

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ವತಿಯಿಂದ ಆಟಿಡೊಂಜಿ ದಿನ ಆಚರಣೆ

ಹೆಜಮಾಡಿ, ಜು.19: ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ ಭಾನುವಾರ ಹೆಜಮಾಡಿಯ ಬಿಲ್ಲವರ ಸಂಘದ ಸಭಾಂಗಣದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ್ ಕತ್ತಲ್ ಅವರು ಮಾತನಾಡಿ, ಆಧುನಿಕ ಆಹಾರ ಪದ್ಧತಿಗಳ ಪರಿಣಾಮವಾಗಿ ಹಿಂದಿನ ಕಾಲದ ಆರೋಗ್ಯಕರ ಆಹಾರ ಸಂಸ್ಕೃತಿ ನಿಧಾನವಾಗಿ ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇಂದಿನ ಆಧುನಿಕ ಜೀವನಶೈಲಿಯಲ್ಲೂ ನಮ್ಮ ಬೇರುಗಳನ್ನು ಮರೆಯದೆ ಮಕ್ಕಳಿಗೆ ತುಳುನಾಡಿನ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳನ್ನು ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.


ತುಳುನಾಡಿನ ಇತಿಹಾಸ, ಆಟಿ ತಿಂಗಳ ಮಹತ್ವ, ಆಚಾರ-ವಿಚಾರಗಳು, ಜಾನಪದ ಕಲೆಗಳು ಮತ್ತು ತುಳು ಭಾಷೆಯ ವೈಭವವನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಅಗತ್ಯವಿದೆ. ಆಟಿಡೊಂಜಿ ದಿನದಂತಹ ಕಾರ್ಯಕ್ರಮಗಳು ಕೇವಲ ಸಂಭ್ರಮಾಚರಣೆಗಳಲ್ಲ, ನಮ್ಮ ಸಂಸ್ಕೃತಿಯನ್ನು ಜೀವಂತವಾಗಿಡುವ ಸಾಮಾಜಿಕ ಚಳವಳಿಗಳಾಗಿವೆ ಎಂದು ಅವರು ಅಭಿಪ್ರಾಯಪಟ್ಟರು. ಆಟಿ ತಿಂಗಳು ಕೃಷಿಗೆ ಮಹತ್ವ ನೀಡುವ ಕಾಲವಾಗಿದ್ದು, ಅಗಲಿದ ಹಿರಿಯರನ್ನು ಸ್ಮರಿಸುವ ಸಮಯವೂ ಆಗಿದೆ. ಈ ಅವಧಿಯಲ್ಲಿ ದೈವಾರಾಧನೆ ಮತ್ತು ಶುಭ ಸಮಾರಂಭಗಳಿಗೆ ವಿರಾಮ ನೀಡುವ ಸಂಪ್ರದಾಯವಿದೆ ಎಂದು ತಿಳಿಸಿದರು.
ಮಾಜಿ ಸಚಿವ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಟಿಡೊಂಜಿ ದಿನವು ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ಸಮಾಜದ ಒಗ್ಗಟ್ಟನ್ನು ಬಿಂಬಿಸುವ ಹಬ್ಬವಾಗಿದೆ ಎಂದರು. ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ನಮ್ಮ ಪರಂಪರೆಯನ್ನು ಪರಿಚಯಿಸುವ ಸೇತುವೆಯಾಗಬೇಕು. ಸಮಾಜದಲ್ಲಿ ಪ್ರೀತಿ, ವಿಶ್ವಾಸ ಹಾಗೂ ಒಗ್ಗಟ್ಟನ್ನು ಬೆಳೆಸುವಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು. ಯುವಜನರಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ವ್ಯಸನ ಸಮಾಜಕ್ಕೆ ಗಂಭೀರ ಸವಾಲಾಗಿದ್ದು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಭೋಧ್ ಚಂದ್ರ ಹೆಜ್ಮಾಡಿ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಂಗಳೂರಿನ ಸಿಸ್ಲಿಂಗ್ ಗಾಯ್ಸ್ ತಂಡದವರಿಂದ ತುಳುನಾಡಿನ ಜಾನಪದ ವೈಭವ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು. ಸಹನಾ ಪಡುಬಿದ್ರಿ ಮತ್ತು ಸುಪ್ರೀತಾ ಪಣಿಯೂರು ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ‘ಗಜಾನನ ಕ್ರಿಕೆಟರ್ಸ್’ ತುಳು ಚಲನಚಿತ್ರದ ಬಾಲನಟ ಮಾಸ್ಟರ್ ಸ್ಕಂದ ದಯಾನಂದ್ ಹೆಜ್ಮಾಡಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಸಂಯೋಜಕರಾದ ದೀಕ್ಷಾ ಕೆ. ಮತ್ತು ವಿಶಾಲ್ ಬಂಗೇರ ಅವರನ್ನು ಗೌರವಿಸಲಾಯಿತು. ಸಾರ್ವಜನಿಕರಿಗೆ ಆಟಿ ತಿಂಗಳ ಸಂಪ್ರದಾಯಿಕ ವಿಶೇಷ ತಿಂಡಿ-ತಿನಿಸುಗಳ ಊಟವನ್ನು ಬಡಿಸಲಾಯಿತು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಂತಲತಾ ಶೆಟ್ಟಿ, ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಕ್ತೇಸರ ದಯಾನಂದ್ ಹೆಜ್ಮಾಡಿ, ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜ್ಮಾಡಿ, ಉದ್ಯಮಿ ರಾಲ್ಫಿ ಡಿ ಕೋಸ್ತಾ, ಶಿವರಾಮ ಶೆಟ್ಟಿ, ಅಬ್ದುಲ್ ಅಜೀಜ್ ಹೆಜ್ಮಾಡಿ, ಸೌಜನ್ ಕುಮಾರ್ ಸಾಲಿಗ್ರಾಮ, ಹಾಜಿ ಸಯ್ಯದ್ ಅಲಿ, ಹರೀಶ್ಚಂದ್ರ ಹೆಜ್ಮಾಡಿ ಹಾಗೂ ಜಯಶ್ರೀ ಶರತ್ ಉಪಸ್ಥಿತರಿದ್ದರು.
ಪ್ರಭೋಧ್ ಚಂದ್ರ ಹೆಜ್ಮಾಡಿ ಸ್ವಾಗತಿಸಿದರು. ಸಂತೋಷ್ ಪಡುಬಿದ್ರಿ ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ಕರ್ಕೇರ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments