ಸುಬ್ರಮಣ್ಯ: ದಕ್ಷಿಣ ಭಾರತದ ಪ್ರಸಿದ್ಧ ನಾಗರಾಧನೆಯ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ತಿಂಗಳಿಗೊಮ್ಮೆ ಬರುವ ಶುದ್ಧ ಷಷ್ಟಿ ಈ ದಿನ ರವಿವಾರದೊಂದಿಗೆ ಬಂದುದರಿಂದ ಅತ್ಯಧಿಕ ಭಕ್ತ ಜನರು ಕುಕ್ಕೆಗೆ ಆಗಮಿಸಿ ಶ್ರೀ ದೇವರ ದರ್ಶನ ಪ್ರಸಾದ ಸ್ವೀಕರಿಸಿದರು.

ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯು ಇಂದು ಕೂಡ ಇದ್ದು ಭಕ್ತರಿಗೆ ಸ್ವಲ್ಪ ತೊಂದರೆ ಉಂಟಾಯಿತು. ಆದರೂ ಮಳೆಯನ್ನ ಲೆಕ್ಕಿಸದೆ ರಥ ಬೀದಿಯಿಂದಲೇ ಆಗಮಿಸಿ ಶ್ರೀ ದೇವಳದ ಹೊರಾಂಗಣ ಪ್ರವೇಶಿಸಿ, ಒಳಾಂಗಣ ಸೇರಿದರು. ಈ ದೇವಳದ ಗೋಪುರದ ಮುಂಭಾಗದಿಂದಲೇ ಭಕ್ತ ಸಮೂಹ ಒಮ್ಮೆಗೆ ಜಮಾಯಿಸಿ ಕೆಲ ಹೊತ್ತು ಅಲ್ಲಿ ನಿಲ್ಲಬೇಕಾಯಿತು.ಹಾಗೆ ಹೊರಾಂಗಣದಲ್ಲಿ ಕೂಡ ಎಲ್ಲಾ ಸರತಿ ಸಾಲುಗಳು ಭರ್ತಿಯಾಗಿ ಹೊರಾಂಗಣದಲ್ಲಿ ಸುತ್ತು ಬರಲು ಭಕ್ತರು ನೂಕು ನುಗ್ಗಲ್ ನೊಂದಿಗೆ ಹರಸಾಹಸ ಪಡಬೇಕಾಯಿತು. ಆದರೂ ಶ್ರೀದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ,ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಅವರ ಮಾರ್ಗದರ್ಶನದಲ್ಲಿ ಹಾಗೂ ಸ್ವತಃ ಅವರೇ ಅಲ್ಲಿ ಇದ್ದು ಭಕ್ತಾದಿಗಳಿಗೆ ಸುಗಮ ದರ್ಶನ ಹಾಗೂ ಪ್ರಸಾದ ಸ್ವೀಕಾರಕ್ಕೆ ವ್ಯವಸ್ಥೆ ಮಾಡಿದ್ದರು. ಆದಿ ಸುಬ್ರಹ್ಮಣ್ಯದಲ್ಲಿ ಮಧ್ಯಾಹ್ನದ ಅನ್ನಪ್ರಸಾದ ಕ್ಕೆ ಬಫೆ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು. ದೇವಳದ ಪರಿಸರ ಹಾಗೂ ಪಟ್ಟಣ ಸುತ್ತ ಎಲ್ಲಾ ಕಡೆ ಭಕ್ತಾದಿಗಳ ವಾಹನಗಳು ಪಾರ್ಕಿಂಗ್ ಪ್ರದೇಶದಲ್ಲಿ ತುಂಬಿದ್ದವು.


