ಕಟಪಾಡಿ: ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪೀಠಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಅನಂತಶ್ರೀವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಪರಾಭವ ನಾಮ ಸಂವತ್ಸರದ 22ನೇ ವರ್ಷದ ಚಾತುರ್ಮಾಸ್ಯ ವ್ರತವನ್ನು 2026ರ ಜುಲೈ 29ರಿಂದ ಸೆಪ್ಟೆಂಬರ್ 26ರವರೆಗೆ ಪಡುಕುತ್ಯಾರಿನ ಶ್ರೀ ಸರಸ್ವತೀ ಸತ್ಸಂಗ ಮಂದಿರದಲ್ಲಿ ವೈಭವದಿಂದ ಆಚರಿಸಲಿದ್ದಾರೆ.
ಈ ಬಾರಿಯ ಚಾತುರ್ಮಾಸ್ಯವು ಜಗದ್ಗುರುಗಳವರ 50ನೇ ಜನ್ಮವರ್ಧಂತಿಯ ಸುವರ್ಣ ಸಂಭ್ರಮ ವರ್ಷಾಚರಣೆ (2026–2027)ಯ ಅಂಗವಾಗಿ ವಿಶೇಷ ಮಹತ್ವ ಪಡೆದಿದ್ದು, ವೈದಿಕ ಸಂಪ್ರದಾಯ, ಧಾರ್ಮಿಕ ಜಾಗೃತಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಸಮನ್ವಯದೊಂದಿಗೆ ನಡೆಯಲಿದೆ.
ಜುಲೈ 29ರಂದು ಬೆಳಿಗ್ಗೆ ಶ್ರೀಕರಾರ್ಚಿತ ದೇವತಾ ಪೂಜೆ, ಶ್ರೀ ವಿಶ್ವಕರ್ಮ ಯಜ್ಞ, ಚಾತುರ್ಮಾಸ್ಯ ವ್ರತ ಸಂಕಲ್ಪ, ಶ್ರೀ ಗುರುಪಾದುಕಾ ಪೂಜೆ ಸೇರಿದಂತೆ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. ಸಮಾಜದ ಹಿರಿಯ ಹಾಗೂ ಕಿರಿಯ ವೈದಿಕರು, ಶ್ರೀ ಸರಸ್ವತೀ ಪೂರ್ವ ಛಾತ್ರ ಸಂಘದ ಸದಸ್ಯರು ಮತ್ತು ಶ್ರೀ ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಲಿದ್ದಾರೆ. ಮಧ್ಯಾಹ್ನ ನಡೆಯುವ ಧಾರ್ಮಿಕ ಸಭೆಯಲ್ಲಿ ಜಗದ್ಗುರುಗಳವರು ಆಶೀರ್ವಚನ ನೀಡಲಿದ್ದಾರೆ.
ಆಗಸ್ಟ್ 9ರಂದು ಜಗದ್ಗುರುಗಳವರ ಜನ್ಮವರ್ಧಂತಿ ಅಂಗವಾಗಿ ಯಜ್ಞ-ಯಾಗಾದಿಗಳು, ಶ್ರೀ ಕನಕಧಾರಾ ಸ್ತೋತ್ರ ಹೋಮ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ, ಶ್ರೀ ಲಕ್ಷ್ಮೀ ಶೋಭಾನೆ ಪಾರಾಯಣ ಸೇರಿದಂತೆ ವಿಶೇಷ ವೈದಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ 9 ಗಂಟೆಗೆ ತುಲಾಭಾರ ಸೇವೆ ಹಾಗೂ ನಂತರ ಧರ್ಮಸಂಸತ್ತು ನಡೆಯಲಿದ್ದು, ಆಸ್ಥಾನ ವಿದ್ವಾಂಸರು ಭಾಗವಹಿಸಲಿದ್ದಾರೆ.
ಆಗಸ್ಟ್ 23ರಂದು ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ 95 ಶೇಕಡಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಪದವಿ ಮತ್ತು ಸ್ನಾತಕೋತ್ತರ ರ್ಯಾಂಕ್ ವಿಜೇತರು, ವೃತ್ತಿಪರ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡಿದವರು ಮತ್ತು ಡಾಕ್ಟರೇಟ್ ಪದವಿ ಪಡೆದ ಪ್ರತಿಭಾವಂತರನ್ನು ಜಗದ್ಗುರುಗಳವರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು.
ಸೆಪ್ಟೆಂಬರ್ 20ರಂದು ಅಷ್ಟೋತ್ತರ ಸಹಸ್ರ ಮೃತ್ತಿಕಾ ಲಿಂಗಾರ್ಚನೆ, ಶಿವಪಂಚಾಕ್ಷರೀ ಮಂತ್ರೋಪದೇಶ ಹಾಗೂ ರುದ್ರಾಕ್ಷಿ ಪ್ರಸಾದ ವಿತರಣೆಯೊಂದಿಗೆ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.
ಸೆಪ್ಟೆಂಬರ್ 26ರಂದು ಸೀಮೋಲ್ಲಂಘನ ಹಾಗೂ ಚಾತುರ್ಮಾಸ್ಯ ಸಮಾಪ್ತಿ ಕಾರ್ಯಕ್ರಮ ನಡೆಯಲಿದ್ದು, ವಿಶ್ವಕರ್ಮ ಯಜ್ಞ, ಧಾರ್ಮಿಕ ಸಭೆ ಮತ್ತು ಜಗದ್ಗುರುಗಳವರ ಆಶೀರ್ವಚನದೊಂದಿಗೆ ವ್ರತಾಚರಣೆಗೆ ಸಮಾರೋಪ ದೊರೆಯಲಿದೆ.
ಚಾತುರ್ಮಾಸ್ಯದ ಅವಧಿಯಲ್ಲಿ ಪ್ರತಿದಿನ ಶ್ರೀದುರ್ಗಾ ನಮಸ್ಕಾರ ಪೂಜೆ, ಗುರುಪಾದುಕಾ ಪೂಜೆ, ಜಗದ್ಗುರುಗಳವರ ಆಶೀರ್ವಚನ, ಪ್ರಸಾದ ಭೋಜನ, ಭಜನೆ, ಪಾರಾಯಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಭಕ್ತರ ಸಂದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ.
ಭಾನುವಾರ ಹಾಗೂ ಚಾತುರ್ಮಾಸ್ಯದ ಕೊನೆಯ ವಾರದಲ್ಲಿ ಭಕ್ತರ ಅನುಕೂಲಕ್ಕಾಗಿ ಬೆಳಿಗ್ಗೆ 10.30ರಿಂದಲೇ ಗುರುಪಾದುಕಾ ಪೂಜೆ ಆರಂಭವಾಗಲಿದ್ದು, ಹಂತ ಹಂತವಾಗಿ ಫಲನ್ಯಾಸ ಮತ್ತು ಮಂತ್ರಾಕ್ಷತೆ ವಿತರಿಸಲಾಗುವುದು.
ಚಾತುರ್ಮಾಸ್ಯವನ್ನು ಸಮಾಜದ ಸಮಗ್ರ ಭಾಗವಹಿಸುವಿಕೆಯಲ್ಲಿ ನಡೆಸುವ ಉದ್ದೇಶದಿಂದ ಕರಾವಳಿ ಭಾಗದ ಪ್ರಮುಖ ವಿಶ್ವಕರ್ಮ ದೇವಸ್ಥಾನಗಳಿಗೆ ವಾರವಾರದ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಮಂಗಳೂರು, ಬಾರ್ಕೂರು, ಹಳೇಹುಬ್ಬಳ್ಳಿ, ಧಾರವಾಡ, ಹೊಸಪೇಟೆ, ಗೋಕರ್ಣ, ಅಂಕೋಲಾ, ಮೂಡಬಿದ್ರೆ, ನವಿಮುಂಬೈ, ಬೆಂಗಳೂರು, ಬಂಗ್ರಮಂಜೇಶ್ವರ, ಮಧೂರು, ಕಾಪು, ಕೊಲಕಾಡಿ, ಪಡುಪಣಂಬೂರು, ಹಳೆಯಂಗಡಿ, ಕುಂಬಳೆ, ಕಟಪಾಡಿ, ಕಾರ್ಕಳ, ಕೋಟೆಕಾರು, ಉಪ್ರಳ್ಳಿ, ಭಟ್ಕಳ ಹಾಗೂ ಕಾಞಂಗಾಡು ಸೇರಿದಂತೆ ವಿವಿಧ ದೇವಸ್ಥಾನಗಳು ತಮ್ಮ ನಿಗದಿತ ವಾರಗಳಲ್ಲಿ ಕಾರ್ಯಕ್ರಮಗಳ ಉಸ್ತುವಾರಿ ವಹಿಸಲಿವೆ.
ಭಕ್ತಾದಿಗಳಿಗೆ ಸ್ವರ್ಣ ನಾಣ್ಯದೊಂದಿಗೆ ಗುರುಪಾದುಕಾ ಪೂಜೆ, ಬೆಳ್ಳಿ ನಾಣ್ಯದೊಂದಿಗೆ ವಿವಿಧ ಸೇವೆಗಳು, ಗುರುಭಿಕ್ಷೆ, ವಸ್ತ್ರದಾನ, ಸಂತರ್ಪಣೆ, ಪ್ರತಿದಿನ ದುರ್ಗಾ ನಮಸ್ಕಾರ ಪೂಜೆ ಸೇರಿದಂತೆ ವಿವಿಧ ಸೇವೆಗಳನ್ನು ನೆರವೇರಿಸುವ ಅವಕಾಶ ಕಲ್ಪಿಸಲಾಗಿದೆ. ಜನ್ಮವರ್ಧಂತಿಯ ದಿನ ವಿಶೇಷ ತುಲಾಭಾರ ಸೇವೆಯೂ ನಡೆಯಲಿದೆ.
ಜಗದ್ಗುರುಗಳವರ 50ನೇ ಜನ್ಮವರ್ಧಂತಿಯ ಅಂಗವಾಗಿ ಒಂದು ವರ್ಷದ “ಸುವರ್ಣ ಸಂಕಲ್ಪ” ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ. ಇದರಡಿ ಶ್ರೀ ಬಾಲ ಸರಸ್ವತೀ ಹೋಮ, ಪಂಚಪ್ರಬೋಧ ಜಾಗೃತಿ ಅಭಿಯಾನ, ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳು, ಚಿಂತನ-ಮಂಥನ ಕಾರ್ಯಾಗಾರಗಳು ಹಾಗೂ ಆನೆಗುಂದಿ ಕುಲಗುರುಪೀಠ–ಶ್ರೀ ಸರಸ್ವತೀ ದೇವಸ್ಥಾನದ ಬೃಹತ್ ಶಿಲಾನ್ಯಾಸ ಕಾರ್ಯಕ್ರಮ ಸೇರಿದಂತೆ ಐದು ಪ್ರಮುಖ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು.
ಇದರೊಂದಿಗೆ “ಶ್ರೀನಿಧಿ” ಕುಂಭ ಯೋಜನೆ, ನಿತ್ಯ ಅನ್ನದಾಸೋಹ, ಭೂದಾನ ನಿಧಿ, ಸೂರ್ಯ ಚೈತನ್ಯ ಗ್ಲೋಬಲ್ ಹೈಸ್ಕೂಲ್ ಅಭಿವೃದ್ಧಿ, ಶ್ರೀ ಸರಸ್ವತೀ ಗೋಶಾಲೆ ನಿರ್ಮಾಣ, ವೈದಿಕ ಶಿಕ್ಷಣ ಸಂರಕ್ಷಣೆ ಹಾಗೂ ಸಮಾಜ ಸಂಘಟನೆಗೆ ಸಂಬಂಧಿಸಿದ ವಿವಿಧ ಶಾಶ್ವತ ಯೋಜನೆಗಳಿಗೆ ಭಕ್ತರಿಂದ ಸಹಕಾರ ಕೋರಲಾಗಿದೆ.
ಆನೆಗುಂದಿ ಪ್ರತಿಷ್ಠಾನ, ಅಸೆಟ್, ಗೋವು ಪರಿಸರ ಟ್ರಸ್ಟ್, ಸರಸ್ವತಿ ಮಾತೃ ಮಂಡಳಿ, ಆನೆಗುಂದಿ ಗುರುಸೇವಾ ಪರಿಷತ್, ನಾಗಧರ್ಮೇಂದ್ರ ಸರಸ್ವತೀ ಸಂಸ್ಕೃತ ವೇದ ಸಂಜೀವಿನೀ ಪಾಠಶಾಲೆ, ಸರಸ್ವತಿ ಪೂರ್ವ ಛಾತ್ರ ಸಂಘ, ಸರಸ್ವತಿ ಹೌಸಿಂಗ್ ಸೊಸೈಟಿ ಹಾಗೂ ವಿವಿಧ ಉಪವಿಭಾಗಗಳು ಚಾತುರ್ಮಾಸ್ಯದ ಯಶಸ್ವಿಗೆ ಕೈಜೋಡಿಸಿವೆ.
ಈ ಪುಣ್ಯಕಾಲದಲ್ಲಿ ಸಮಸ್ತ ಶಿಷ್ಯವೃಂದ ಹಾಗೂ ಭಕ್ತರು ಸಕುಟುಂಬ ಸಮೇತರಾಗಿ ಆಗಮಿಸಿ ಜಗದ್ಗುರುಗಳವರ ದರ್ಶನ ಪಡೆದು ಗುರುಪಾದುಕಾ ಪೂಜೆ, ಶ್ರೀದುರ್ಗಾ ನಮಸ್ಕಾರ ಪೂಜೆ ಸೇರಿದಂತೆ ವಿವಿಧ ಸೇವೆಗಳಲ್ಲಿ ಭಾಗವಹಿಸಿ ಅನುಗ್ರಹ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಶ್ರೀಮಾತೆ ಮಹಾಸರಸ್ವತಿ ಹಾಗೂ ಕುಲಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಚಾತುರ್ಮಾಸ್ಯ ವ್ರತ ನಿರ್ವಹಣಾ ಸಮಿತಿಯ ಗೌರವಾಧ್ಯಕ್ಷ ಪಿ.ವಿ. ಗಂಗಾಧರ ಆಚಾರ್ಯ (ಉಡುಪಿ), ಅಧ್ಯಕ್ಷ ವಿ. ಶ್ರೀಧರ ಆಚಾರ್ಯ (ವಡೆರಹೋಬಳಿ), ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ (ಕಂಬಾರು) ಹಾಗೂ ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ ಪ್ರಕಟಣೆಯಲ್ಲಿ ತಿಳಿಸಿ.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸ ಬೇಕೆಂದು ವಿನಂತಿಸಿ ಕೊಂಡಿದ್ದಾರೆ.
ಪ್ರಧಾನ ಕಾರ್ಯದರ್ಶಿ: 9947360144, 7012529295
ಕೋಶಾಧಿಕಾರಿ: 9880599125
ಚಾತುರ್ಮಾಸ್ಯ ಸೇವಾ ಮಾಹಿತಿ: 9964072303


