ಬಂಟ್ವಾಳ: ಎಲ್ಲಾ ಇಲಾಖೆಯ ಅಧಿಕಾರಿಗಳು ಪರಸ್ಪರ ಒಬ್ಬರೊಬ್ಬರನ್ನು ದೂಷಿಸದೆ ಒಗ್ಗಟ್ಟು ಹಾಗೂ ಹೊಂದಾಣಿಕೆಯಿಂದ ಜನರಿಗೆ ಗೊಂದಲ, ತೊಂದರೆಯಾಗದಂತೆ ಕೆಲಸ ಮಾಡಬೇಕು, ಅಧಿಕಾರಿಗಳು ಸರಕಾರದ ಮುಖವಿದ್ದಂತೆ, ಅಧಿಕಾರಿಗಳು ಸಮರ್ಥವಾಗಿ ಕೆಲಸ ಮಾಡಿದಾಗ ಸರಕಾರಕ್ಕೆ ಉತ್ತಮ ಹೆಸರು ಬರುತ್ತದೆ. ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದು, ಹಣಕಾಸು ಬಿಡುಗಡೆ ಮಾಡಿಯೂ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದೇ ಇದ್ದರೆ ಜನ ಸಾಮಾನ್ಯರು ಜನಪ್ರತಿನಿಧಿಗಳನ್ನು ಹಾಗೂ ಸರಕಾರವನ್ನು ದೂಷಿಸಿತ್ತಾರೆಯೇ ಹೊರತು ಅಧಿಕಾರಿಗಳನ್ನಲ್ಲ. ಸರಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಮಾಡಬೇಕು. ಈ ಕಾರ್ಯದಲ್ಲಿ ಅಧಿಕಾರಿಗಳು ಆಕ್ಟಿವ್ ಮಾತ್ರವಲ್ಲ ಪ್ರೋ ಆಕ್ಟಿವ್ ಆಗಿರ ಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು
ರ ಬಂಟ್ವಾಳಕ್ಕೆ ಆಗಮಿಸಿ ಅವರು ಆರೋಗ್ಯ ಹಾಗೂ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧಿಕಾರಿಗಳ ಮಟ್ಟದ ಸಭೆ ನಡೆಸಿ, ಮಳೆ ಹಾನಿ ಹಾಗೂ ಇಲಾಖಾವಾರು ಮಾಹಿತಿಯನ್ನು ಪಡೆದುಕೊಂಡರು.
ಅಧಿಕಾರಿಗಳು ಕೆಲವೊಮ್ಮೆ ಮಾನವೀಯ ದೃಷ್ಟಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಬುದ್ಧಿವಂತಿಕೆ ಜೊತೆಗೆ ಹೃದಯವಂತಿಕೆಯೂ ಇರಲಿ. ಸಚಿವರು, ಜನಪ್ರತಿನಿಧಿಗಳು ಬರಬೇಕು ಎಂದೇನೂ ಇಲ್ಲ. ಅಧಿಕಾರಿಗಳು ಪ್ರಜ್ಞಾವಂತರಾಗಿದ್ದರೆ, ಜನರ ಕೆಲಸ ಸುಲಭವಾಗುತ್ತದೆ. ಜನ ಮೆಚ್ಚುವಂಥ ಅಧಿಕಾರಿಗಳಾಗಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿಗಳಿಗೆ ಮೀಸಲಿರುವ ಸರಕಾರದ ಅನುದಾನವನ್ನು ಸಾರ್ವಜನಿಕ ಉದ್ದೇಶಕಷ್ಟೇ ಬಳಸಿ ಎಂದು ಗ್ರಾಪಂ ಪಿಡಿಒಗಳಿಗೆ ಕಿವಿಮಾತು ಹೇಳಿದ ಯು.ಟಿ.ಖಾದರ್, ಬಳಕೆಯಾಗುವ ನಿಧಿಯ ಕುರಿತು ನಿಗಾ ವಹಿಸುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಅವರಿಗೆ ಸೂಚಿಸಿದರು.
ಜನ, ಜಾನುವಾರುಗಳಿಗೆ ಹಾವು ಕಚ್ಚಿದರೆ ತುರ್ತು ಚಿಕಿತ್ಸೆ ವ್ಯವಸ್ಥೆ ಅಗತ್ಯ, ಇದರ ಲಭ್ಯತೆ ಕುರಿತು ತಾಲೂಕು ಪಶುವೈದ್ಯಾಧಿಕಾರಿ ಹಾಗೂ ಆರೋಗ್ಯಾಧಿಕಾರಿಗಳಿಗೆ ಪ್ರಶ್ನಿಸಿದರು. ಎಲ್ಲ ಶಾಲೆಗಳಲ್ಲೂ ಬಸ್ ಗಳು ಸಮರ್ಪಕವಾದ ದಾಖಲೆಗಳನ್ನು ಹೊಂದಿರುವಂತೆ ಹಾಗೂ ನಿಯಮಪಾಲನೆ ಮಾಡುತ್ತಿವೆಯೇ ಎಂಬುದನ್ನು ನಿಗಾ ಇರಿಸಬೇಕು ಎಂದು ಸೂಚಿಸಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಎಚ್.ವಿ.ದರ್ಶನ್ ತಾಲೂಕಿನಲ್ಲಿ ಮಳೆಯಿಂದಾಗಿ ಆಗಿರುವ ಹಾನಿಗಳು ಹಾಗೂ ಅವುಗಳಿಗೆ ನೀಡಿದ ಪರಿಹಾರದ ಕುರಿತು ವಿವರ ಕೇಳಿದರು.
ಸಚಿವರ ಆಗಮನ ಹಿನ್ನೆಲೆಯಲ್ಲಿ ಹಲವು ಅಹವಾಲುಗಳನ್ನು ಸಾರ್ವಜನಿಕರು ನೀಡಿದರು. ಕೆಡಿಪಿ ನಾಮನಿರ್ದೇಶಿತ ಸದಸ್ಯ ಮಹಮ್ಮದ್ ನಂದಾವರ ಮಾತನಾಡಿ, ಶೀಘ್ರ ಕೆಡಿಪಿ ಸಭೆ ಕರೆಯುವಂತೆ ಮನವಿ ಮಾಡಿದರು. ಮಾಜಿ ಸಚಿವ ರಮಾನಾಥ ರೈ ಅವರೂ ಈ ಸಂದರ್ಭ ಕೆಡಿಪಿ ಸಭೆ ನಡೆಯದ ಕುರಿತು ಗಮನ ಸೆಳೆದರು. ಸಮಿತಿಯ ಸಭೆ ಮೂರು ಬಾರಿ ಮೂಂದೂಡಲ್ಪಟ್ಟಿದೆ. ಕೆಡಿಪಿ ಮೀಟಿಂಗ್ ಆಗಿಲ್ಲ ಎಂದು ಮಹಮ್ಮದ್ ನಂದಾವರ ಹೇಳಿದರು. ಮುನ್ಸಿಪಾಲಿಟಿಗೆ ಆಡಳಿತಾಧಿಕಾರಿಯಾದ ಸಹಾಯಕ ಕಮೀಷನರ್ ಬಂದು ಪರಿಶೀಲನೆ ಮಾಡಬೇಕು ಎಂದು ಸ್ಥಳೀಯರಾದ ಸಮದ್ ಹೇಳಿ, ಮನವಿ ಸಲ್ಲಿಸಿದರು. ರೈತ ಸಲಹಾ ಸಮಿತಿಯ ಆಯ್ಕೆ ಕುರಿತು ಚಂದ್ರಶೇಖರ ಭಂಡಾರಿ ಪ್ರಶ್ನಿಸಿದರು. ಮೆಲ್ಕಾರ್ ನಲ್ಲಿ ರಾತ್ರಿ ವಿದ್ಯುತ್ ಸಿಬ್ಬಂದಿ ಅಗತ್ಯ ಕುರಿತು ಸಿದ್ದೀಕ್ ಗುಡ್ಡೆಯಂಗಡಿ ಗಮನ ಸೆಳೆದರು.
ಈ ಸಂದರ್ಭ ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಮಾಜಿ ಸಚಿವ ಬಿ.ರಮಾನಾಥ ರೈ ಉಪಸ್ಥಿತರಿದ್ದರು.
ಸಚಿವರ ಆಗಮನ ಹಿನ್ನೆಲೆಯಲ್ಲಿ ಹಲವು ಅಹವಾಲುಗಳನ್ನು ಸಾರ್ವಜನಿಕರು ನೀಡಿದರು.


